ಮಂಗಳೂರು, ಜೂನ್ 30: ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ದಿಟ್ಟ ನಿರ್ಧಾರ ಮತ್ತು ಆತ್ಮವಿಶ್ವಾಸದಿಂದ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಹೇಳಿದರು.

ಅವರು ಮಹಿಳಾ ಮಂಡಲ (ರಿ.) ಕುಳಾಯಿ, ಮಂಗಳೂರಿನಲ್ಲಿ ನಡೆದ “ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಮಾತನಾಡಿ, ಮಹಿಳೆಯರು ಸಣ್ಣ-ಪುಟ್ಟ ಸಂಘ-ಸಂಸ್ಥೆಗಳ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವುದರಿಂದ ಉದ್ಯಮ ಆರಂಭಿಸುವ ಧೈರ್ಯ ಮತ್ತು ಆತ್ಮವಿಶ್ವಾಸ ಬೆಳೆಯುತ್ತದೆ. ತಾವು ಕೂಡ ಇಂತಹ ತರಬೇತಿ ಶಿಬಿರಗಳಲ್ಲಿ ಭಾಗವಹಿಸಿದ ನಂತರವೇ ಉದ್ಯಮ ಕ್ಷೇತ್ರದಲ್ಲಿ ಮುನ್ನಡೆಯಲು ಸಾಧ್ಯವಾಯಿತು ಎಂದು ತಮ್ಮ ಅನುಭವ ಹಂಚಿಕೊಂಡರು.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ, ಸಿಡಾಕ್ ಮಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಮಂಗಳೂರು, ಜಿಲ್ಲಾ ಕೌಶಲ್ಯ ಮಿಷನ್ ಮಂಗಳೂರು, ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ, ಯುವವಾಹಿನಿ (ರಿ.) ಸುರತ್ಕಲ್ ಘಟಕ ಹಾಗೂ ಮಹಿಳಾ ಮಂಡಲ (ರಿ.) ಕುಳಾಯಿ, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಈ ಶಿಬಿರ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಸಿಡಾಕ್ ಮಂಗಳೂರು ಉಪನಿರ್ದೇಶಕ ಶಿವಾನಂದ ಎಲಿಗಾರ್ ಉದ್ಯಮಶೀಲತೆ ತರಬೇತಿಯಿಂದ ಬೆಳೆಸಿಕೊಳ್ಳಬಹುದಾದ ಕೌಶಲ್ಯವಾಗಿದ್ದು, ಉದ್ಯಮ ಆರಂಭಕ್ಕೆ ಅಗತ್ಯವಿರುವ ಸರ್ಕಾರಿ ಸೌಲಭ್ಯಗಳು, ಮಾರುಕಟ್ಟೆ ವ್ಯವಸ್ಥೆ, ಲೆಕ್ಕಪತ್ರ ನಿರ್ವಹಣೆ, ಪರವಾನಗಿ, ಯೋಜನಾ ವರದಿ (ಪ್ರಾಜೆಕ್ಟ್ ರಿಪೋರ್ಟ್) ಸಿದ್ಧತೆ ಹಾಗೂ ಬ್ಯಾಂಕ್ ಸಾಲ ಮತ್ತು ಹಣಕಾಸು ವ್ಯವಸ್ಥೆಗಳ ಕುರಿತು ಸಮಗ್ರ ಮಾಹಿತಿ ನೀಡಿದರು.
ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಉದ್ಯಮದಲ್ಲಿ ಪರಿಣಾಮಕಾರಿ ಮಾತುಗಾರಿಕೆ, ಉತ್ತಮ ಪ್ರಸ್ತುತಿಕೆ ಹಾಗೂ ವ್ಯಕ್ತಿತ್ವ ವಿಕಸನದ ಮಹತ್ವವನ್ನು ವಿವರಿಸಿದರು. ಎಫ್‌ಎಲ್‌ಸಿ ಕೌನ್ಸಿಲರ್ ಲತೀಶ್ ವಿವಿಧ ಸರ್ಕಾರಿ ಯೋಜನೆಗಳು ಹಾಗೂ ಅವುಗಳ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ, ಯುವವಾಹಿನಿ ಕೇಂದ್ರ ಸಮಿತಿ (ರಿ.) ಮಂಗಳೂರು ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಸಿಡಾಕ್ ಮಂಗಳೂರು ಉಪನಿರ್ದೇಶಕ ಶಿವಾನಂದ ಎಲಿಗಾರ್, ಜಿಲ್ಲಾ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್, ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್, ಯುವವಾಹಿನಿ (ರಿ.) ಸುರತ್ಕಲ್ ಘಟಕದ ಅಧ್ಯಕ್ಷೆ ರೇವತಿ ನವೀನ್, ಕೆಎಸ್‌ಟಿಎ ಕುಳಾಯಿ ವಲಯ ಸಮಿತಿಯ ಅಧ್ಯಕ್ಷ ಪ್ರಭಾಕರ ಕೋಟ್ಯಾನ್ ಹಾಗೂ ತರಬೇತುದಾರರಾದ ವಿಧ್ಯಾ ಉಪಸ್ಥಿತರಿದ್ದರು.
ಸುಮಾರು 50 ಮಂದಿ ಮಹಿಳೆಯರು ಶಿಬಿರದಲ್ಲಿ ಭಾಗವಹಿಸಿ ಉದ್ಯಮಶೀಲತೆ ಕುರಿತ ಉಪಯುಕ್ತ ಮಾಹಿತಿ ಹಾಗೂ ತರಬೇತಿಯ ಪ್ರಯೋಜನ ಪಡೆದರು. ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಕಾರ್ಯದರ್ಶಿ ಸೋನಿಯಾ ರಾಜ್, ಒಂದನೇ ಉಪಾಧ್ಯಕ್ಷೆ ದೀಪಿಕಾ ಮನೋಜ್ ಹಾಗೂ ಘಟಕದ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ರವೀಷಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಣೆ ಹಾಗೂ ವಂದನಾರ್ಪಣೆಯನ್ನು ನೆರವೇರಿಸಿದರು.


