ಮೂಡುಬಿದಿರೆ, ಜೂನ್ 29: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲ ಹಾಗೂ ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರ, ಮೂಡುಬಿದಿರೆ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 5 ದಿನಗಳ ಉಚಿತ ಸೀರೆ ಕುಚ್ಚು ಕೌಶಲ್ಯ ತರಬೇತಿ ಶಿಬಿರದ ಸಮಾರೋಪ ಸಮಾರಂಭವು ಮೂಡುಬಿದಿರೆಯ ಸಮಾಜ ಮಂದಿರದ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಭಾರತೀಯ ವಿಕಾಸ ಟ್ರಸ್ಟ್, ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಮಾತನಾಡಿ, ಮಹಿಳೆಯರು ಕಾಲಕ್ಕೆ ತಕ್ಕಂತೆ ಬೇಡಿಕೆಯಿರುವ ಕೌಶಲ್ಯಗಳನ್ನು ಕಲಿತು ಸ್ವಯಂ ಉದ್ಯೋಗ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಇಂತಹ ಕೌಶಲ್ಯಗಳು ಮನೆಯಲ್ಲಿಯೇ ಉದ್ಯೋಗ ನಿರ್ವಹಿಸಿ ಉತ್ತಮ ಆದಾಯ ಗಳಿಸಲು ನೆರವಾಗುತ್ತವೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್, ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರ ಕಲಿಕೆಯ ಆಸಕ್ತಿ ಹಾಗೂ ಕೌಶಲ್ಯವನ್ನು ಶ್ಲಾಘಿಸಿ, ಮಹಿಳೆಯರು ಸ್ವಯಂ ಉದ್ಯೋಗದತ್ತ ಹೆಜ್ಜೆ ಇಡಲು ಯುವವಾಹಿನಿ ಸದಾ ಅಗತ್ಯ ಸಹಕಾರ ನೀಡಲಿದೆ ಎಂದು ತಿಳಿಸಿದರು. ಘಟಕದ ಮಾಜಿ ಅಧ್ಯಕ್ಷ ಜಗದೀಶ್ಚಂದ್ರ ಡಿ.ಕೆ. ಮಾತನಾಡಿ, ಕೌಶಲ್ಯ ತರಬೇತಿಯ ಪ್ರಯೋಜನವನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದಲ್ಲಿ ಸ್ವಾವಲಂಬಿ ಜೀವನ ನಡೆಸುವಂತೆ ಮಹಿಳೆಯರಿಗೆ ಕರೆ ನೀಡಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಕ್ರೀಡಾ ನಿರ್ದೇಶಕ ಶಂಕರ್ ಕೋಟ್ಯಾನ್ ತರಬೇತಿಯ ನಂತರ ದೊರೆಯಬಹುದಾದ ಉದ್ಯೋಗ ಮತ್ತು ಸ್ವಯಂ ಉದ್ಯೋಗದ ಅವಕಾಶಗಳ ಕುರಿತು ಮಾಹಿತಿ ನೀಡಿದರು. ಘಟಕದ ನಿಕಟಪೂರ್ವ ಅಧ್ಯಕ್ಷ ಮುರಳೀಧರ ಕೋಟ್ಯಾನ್ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಘಟಕದ ಪ್ರಥಮ ಉಪಾಧ್ಯಕ್ಷ ಸಂಪತ್ ಪೂಜಾರಿ ಹಾಗೂ ನಿರ್ದೇಶಕಿ ಶುಭಲಕ್ಷ್ಮಿ ಉಪಸ್ಥಿತರಿದ್ದರು. ತರಬೇತಿಯಲ್ಲಿ ಭಾಗವಹಿಸಿದ್ದ ಮಹಿಳೆಯರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಒಟ್ಟು 34 ಮಹಿಳೆಯರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಆಶಾಲತಾ ಕುಪ್ಪೆಪದವು ಕಾರ್ಯಕ್ರಮ ನಿರೂಪಿಸಿದರು. ಸಹಜ್ ಸ್ವಾಗತಿಸಿ, ಶಮ್ನಾಝ್ ವಂದಿಸಿದರು. ಈ ಕೌಶಲ್ಯ ತರಬೇತಿಯು ಮಹಿಳೆಯರಲ್ಲಿ ಸ್ವಯಂ ಉದ್ಯೋಗದ ಕುರಿತು ಆತ್ಮವಿಶ್ವಾಸ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು.


