ಉಪ್ಪಿನಂಗಡಿ, ಜೂನ್ 21: ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕವು “ಮನೆ ಮನಗಳಲ್ಲಿ ಯುವವಾಹಿನಿ” ಎಂಬ ಧ್ಯೇಯದೊಂದಿಗೆ ಹಮ್ಮಿಕೊಂಡಿರುವ ಮಹತ್ವಾಕಾಂಕ್ಷಿ ಸರಣಿ ಕಾರ್ಯಕ್ರಮ “ಯುವ ಬಾಂಧವ್ಯ–2026”ರ ಅಂಗವಾಗಿ ಘಟಕದ ಮಾಜಿ ಅಧ್ಯಕ್ಷ ಹರೀಶ್ ಪಾಲೆತ್ತಡಿ ಅವರ ಮನೆಯಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘಟಕದ ಅಧ್ಯಕ್ಷ ಮನೋಜ್ ಎನ್. ಸಾಲ್ಯಾನ್, ಘಟಕ ವ್ಯಾಪ್ತಿಯ ಪ್ರತಿಯೊಂದು ಗ್ರಾಮಕ್ಕೂ ಯುವವಾಹಿನಿಯ ಧ್ಯೇಯೋದ್ದೇಶಗಳನ್ನು ತಲುಪಿಸುವ ಮೂಲಕ ಯುವ ಸಮುದಾಯವನ್ನು ಸಂಘಟನೆಯೊಂದಿಗೆ ಬೆಸೆದು, ಸಮಗ್ರ ಹಾಗೂ ಸದೃಢ ಘಟಕವನ್ನು ನಿರ್ಮಿಸುವುದು ಕಾರ್ಯಕ್ರಮದ ಉದ್ದೇಶವಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ಯುವವಾಹಿನಿಯ ಸದಸ್ಯರಾಗಿ ಸಂಘಟನೆಯ ಸಮಾಜಮುಖಿ ಕಾರ್ಯಗಳಲ್ಲಿ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಘಟಕದ ಮಾಜಿ ಅಧ್ಯಕ್ಷ ನವೀನ್ ಪಡ್ಪು ಅವರು ಯುವವಾಹಿನಿಯ ಸಾಮಾಜಿಕ, ಶೈಕ್ಷಣಿಕ ಹಾಗೂ ಸೇವಾ ಚಟುವಟಿಕೆಗಳ ಕುರಿತು ವಿವರಿಸಿದರು. ಅತಿಥಿಯಾಗಿ ಭಾಗವಹಿಸಿದ್ದ ಅರಣ್ಯಾಧಿಕಾರಿ ವಿನಯ ಕುಮಾರ್ ಮಾತನಾಡಿ, “ವಿದ್ಯೆ, ಉದ್ಯೋಗ ಮತ್ತು ಸಂಪರ್ಕ” ಎಂಬ ಧ್ಯೇಯದೊಂದಿಗೆ ಸಾಮಾಜಿಕ ಬದ್ಧತೆಯಿಂದ ಕಾರ್ಯನಿರ್ವಹಿಸುತ್ತಿರುವ ಯುವವಾಹಿನಿಯ ಸೇವಾ ಚಟುವಟಿಕೆಗಳು ಶ್ಲಾಘನೀಯವಾಗಿದ್ದು, ಇನ್ನಷ್ಟು ಸೇವಾಮನೋಭಾವದ ಯುವಕರು ಸಂಘಟನೆಯೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ಹರೀಶ್ ಪಾಲೆತ್ತಡಿ ಹಾಗೂ ಅವರ ಕುಟುಂಬವನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಗುಣಕರ ಅಗ್ನಾಡಿ, ಚಂದ್ರಶೇಖರ ಕೆ. ಸನಿಲ್, ಕುಶಾಲಪ್ಪ ಪೂಜಾರಿ, ಸೋಮಸುಂದರ್ ಕೊಡಿಪಾನ, ನಾಣ್ಯಪ್ಪ ಕೋಟ್ಯಾನ್, ಪದಾಧಿಕಾರಿಗಳಾದ ಅಂಕಿತ್ ಎಂ.ಜೆ., ಲಕ್ಷ್ಮೀಶ್ ನಿಡ್ಡೆಂಕಿ, ಸದಾಶಿವ ಎಲಿಯ, ನಿರ್ದೇಶಕರು, ಸಂಘಟನಾ ಕಾರ್ಯದರ್ಶಿಗಳು, ಸದಸ್ಯರು ಹಾಗೂ ಸಮಾಜಬಂಧುಗಳು ಉಪಸ್ಥಿತರಿದ್ದರು. ಕಾರ್ಯದರ್ಶಿ ರಮೇಶ್ ಎಸ್. ಸಾಂತ್ಯ ವಂದಿಸಿದರು. ಕಾರ್ಯಕ್ರಮವು ಯುವ ಸಮುದಾಯದಲ್ಲಿ ಸಂಘಟನೆಯ ಚಟುವಟಿಕೆಗಳ ಕುರಿತು ಜಾಗೃತಿ ಮೂಡಿಸುವಲ್ಲಿ ಮಹತ್ವದ ಹೆಜ್ಜೆಯಾಯಿತು.


