ಬೆಂಗಳೂರು, ಜೂ. 28: ಯುವವಾಹಿನಿ (ರಿ.) ಬೆಂಗಳೂರು ಘಟಕದ ನೂತನ ಕಚೇರಿಯನ್ನು ಚಿಕ್ಕಬಿದಿರೆಕಲ್ಲು ಸಮೀಪದ ಭವಾನಿನಗರದಲ್ಲಿ ವೈದಿಕ ವಿಧಿ ವಿಧಾನಗಳೊಂದಿಗೆ ಭಾನುವಾರ ಉದ್ಘಾಟಿಸಲಾಯಿತು. ಗುರುಗಳಾದ ಜಯಂತ್ ಸಾಲಿಯಾನ್ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೌರವ ಸಲಹೆಗಾರರಾದ ಕೆ.ಬಿ. ಜಯರಾಮ್ ಹಾಗೂ ಸುಧೀರ್ ಎಸ್.ಪಿ. ಅವರು ರಿಬ್ಬನ್ ಕತ್ತರಿಸುವ ಮೂಲಕ ನೂತನ ಕಚೇರಿಯನ್ನು ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷ ಶ್ರೀಧರ್ ಡಿ., ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೋಟ್ಯಾನ್, ನಿಕಟಪೂರ್ವ ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ, ನೂತನ ಅಧ್ಯಕ್ಷ ವಿಜೇತ್ ವಿ. ಪೂಜಾರಿ, ನೂತನ ಕಾರ್ಯದರ್ಶಿ ಮನೋಜ್ ಕುಮಾರ್ ಟಿ., ನಿಕಟಪೂರ್ವ ಹಾಗೂ ನೂತನ ಪದಾಧಿಕಾರಿಗಳು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು.
ಬಳಿಕ ನಡೆದ ಜಂಟಿ ಸಭೆಯನ್ನು ಸಂಘಟನಾ ಕಾರ್ಯದರ್ಶಿ ಅಕ್ಷತಾ ಸುಧೀರ್ ಅವರು ಗುರುಗಳ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ನಿಕಟಪೂರ್ವ ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು ಪದಗ್ರಹಣ ಕಾರ್ಯಕ್ರಮದ ವರದಿ ಮಂಡಿಸಿ, ಅಧಿಕಾರವನ್ನು ನೂತನ ಕಾರ್ಯದರ್ಶಿ ಮನೋಜ್ ಕುಮಾರ್ ಟಿ. ಅವರಿಗೆ ಹಸ್ತಾಂತರಿಸಿದರು.
ನಿಕಟಪೂರ್ವ ಕೋಶಾಧಿಕಾರಿ ಪ್ರಸನ್ನ ಪೂಜಾರಿ ಅವರು 2025–26ನೇ ಸಾಲಿನ ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಸಭೆಯ ಅನುಮೋದನೆ ಪಡೆದ ಬಳಿಕ ದಾಖಲೆಗಳನ್ನು ನೂತನ ಕೋಶಾಧಿಕಾರಿ ಶೃತಿ ಸಾಲ್ಯಾನ್ ಅವರಿಗೆ ಹಸ್ತಾಂತರಿಸಿದರು. ನಂತರ ನಿರ್ಗಮಿತ ಪದಾಧಿಕಾರಿಗಳು ತಮ್ಮ ಸೇವಾ ಅವಧಿಯ ಅನುಭವಗಳನ್ನು ಹಂಚಿಕೊಂಡು ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿದರು. ನಿಕಟಪೂರ್ವ ಅಧ್ಯಕ್ಷ ಶಶಿಧರ್ ಕೋಟ್ಯಾನ್ ಅವರು ಮಾತನಾಡಿ, ತಮ್ಮ ಅವಧಿಯಲ್ಲಿ ನಡೆದ ಕಾರ್ಯಕ್ರಮಗಳ ಕುರಿತು ವಿವರಿಸಿ, ಟ್ರಸ್ಟ್ ನೋಂದಣಿ, ಉದ್ಯೋಗ ಮೇಳ ಹಾಗೂ ವಧೂ-ವರರ ವೇದಿಕೆ ಮೊದಲಾದ ಅಭಿವೃದ್ಧಿ ಯೋಜನೆಗಳನ್ನು ಪೂರ್ಣಗೊಳಿಸಲು ಎಲ್ಲರ ಸಹಕಾರ ಕೋರಿದರು. ಬಳಿಕ ನೂತನ ಅಧ್ಯಕ್ಷರಿಗೆ ಅಧಿಕಾರ ಹಸ್ತಾಂತರಿಸಿ ಶುಭ ಹಾರೈಸಿದರು.
ನೂತನ ಅಧ್ಯಕ್ಷ ವಿಜೇತ್ ವಿ. ಪೂಜಾರಿ ಅವರು ಮುಂದಿನ ದಿನಗಳಲ್ಲಿ ಘಟಕದಲ್ಲಿ ಕೈಗೊಳ್ಳಲಿರುವ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ಹಿರಿಯರು ಹಾಗೂ ಸದಸ್ಯರ ಸಹಕಾರದೊಂದಿಗೆ ಯುವವಾಹಿನಿಯನ್ನು ಇನ್ನಷ್ಟು ಬಲಿಷ್ಠವಾಗಿ ಬೆಳೆಸುವ ಸಂಕಲ್ಪ ವ್ಯಕ್ತಪಡಿಸಿದರು. ಗೌರವ ಸಲಹೆಗಾರರಾದ ಕೆ.ಬಿ. ಜಯರಾಮ್ ಹಾಗೂ ಸುಧೀರ್ ಎಸ್.ಪಿ. ಅವರು ಯುವಕರಿಗೆ ಮಾರ್ಗದರ್ಶನ ನೀಡಿ ಸಂಘಟನೆಯ ಬೆಳವಣಿಗೆಗೆ ಅಗತ್ಯವಾದ ಸಲಹೆ-ಸೂಚನೆಗಳನ್ನು ನೀಡಿದರು.
ಇದೇ ಸಂದರ್ಭದಲ್ಲಿ ಆರ್ಯ ಈಡಿಗ ಮಹಿಳಾ ಸಂಘದ ‘ನಾರಿ ಶಕ್ತಿ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಸದಸ್ಯರನ್ನು ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಉಪಾಧ್ಯಕ್ಷ ಕಿಶೋರ್ ಅವರು ವಿವಿಧ ಸಂಘ-ಸಂಸ್ಥೆಗಳಿಂದ ಬಂದ ಆಹ್ವಾನ ಪತ್ರಿಕೆಗಳನ್ನು ಸಭೆಯ ಗಮನಕ್ಕೆ ತಂದರು. ಹೊಸ ಸದಸ್ಯರನ್ನು ಪರಿಚಯಿಸಿ, ಜೂನ್ ತಿಂಗಳಲ್ಲಿ ಜನ್ಮದಿನ ಆಚರಿಸಿಕೊಂಡ ಸದಸ್ಯರಿಗೆ ಶುಭಾಶಯಗಳನ್ನು ತಿಳಿಸಲಾಯಿತು. ನಿಕಟಪೂರ್ವ ಕಾರ್ಯದರ್ಶಿ ಸಂತೋಷ್ ಪೂಜಾರಿ ಪಣಪಿಲ ಅವರು ಧನ್ಯವಾದ ಸಮರ್ಪಿಸಿದರು. ಶಿವಪ್ರಸಾದ್ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು.


