ಮಾಣಿ, ಜೂ. 28: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಕರ್ನಾಟಕ ಪ್ರೌಢಶಾಲೆ, ಮಾಣಿಯಲ್ಲಿ ಯುವ ಸದಸ್ಯತ್ವ ಅರಿವು, ನಾಯಕತ್ವ ತರಬೇತಿ ಹಾಗೂ ವಿದ್ಯಾರ್ಥಿ ಅಭಿನಂದನಾ ಕಾರ್ಯಕ್ರಮ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಅವರ ಅಧ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು.

ಕಾರ್ಯಕ್ರಮದ ಆರಂಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ರಾಜೇಶ್ ಸುವರ್ಣ, ಬಂಟ್ವಾಳ ದೀಪ ಪ್ರಜ್ವಲನೆ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಕರ್ನಾಟಕ ಪ್ರೌಢಶಾಲಾ ಮಂಡಳಿಯ ಅಧ್ಯಕ್ಷ ಕಿರಣ್ ಹೆಗ್ಡೆ ಮಾತನಾಡಿ, “ಯುವಜನರಲ್ಲಿ ಸಂಘಟನಾ ಮನೋಭಾವ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಉತ್ತಮ ನಾಯಕರನ್ನು ರೂಪಿಸುವ ಅರ್ಥಪೂರ್ಣ ವೇದಿಕೆಗಳಾಗಿವೆ. ಯುವವಾಹಿನಿಯು ಸಮಾಜಮುಖಿ ಚಟುವಟಿಕೆಗಳ ಮೂಲಕ ಯುವಶಕ್ತಿಯನ್ನು ಒಗ್ಗೂಡಿಸುತ್ತಿರುವುದು ಶ್ಲಾಘನೀಯ ಕಾರ್ಯವಾಗಿದೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಯುವ ಸದಸ್ಯತ್ವ ಅರಿವು ಹಾಗೂ ನಾಯಕತ್ವ ತರಬೇತಿಯ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಸುವರ್ಣ, ಬಂಟ್ವಾಳ ಹಾಗೂ ಯುವವಾಹಿನಿ ರಾಜ್ಯ ವ್ಯಕ್ತಿತ್ವ ವಿಕಸನ ನಿರ್ದೇಶಕ ಸತೀಶ್ ಮುರುವ ಅವರು ಯುವ ಸದಸ್ಯತ್ವದ ಮಹತ್ವ, ಸಂಘಟನೆಯ ಧ್ಯೇಯೋದ್ದೇಶಗಳು, ನಾಯಕತ್ವದ ಗುಣಗಳು, ಸಂಘಟನಾ ಶಿಸ್ತು ಹಾಗೂ ಸಮಾಜಮುಖಿ ಕಾರ್ಯಗಳಲ್ಲಿ ಯುವಜನರ ಸಕ್ರಿಯ ಭಾಗವಹಿಸುವಿಕೆಯ ಕುರಿತು ಪರಿಣಾಮಕಾರಿ ತರಬೇತಿ ನೀಡಿದರು.
ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಸೋಮಸುಂದರ ಸಾಲ್ಯಾನ್ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಘಟಕದ ಕೋಶಾಧಿಕಾರಿ ರಮೇಶ್ ತ್ರಿವೇಣಿ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಮಾಜಿ ಕಾರ್ಯದರ್ಶಿ ಶಾಲಿನಿ ಜಗದೀಶ್ ಕುದುರೆಬೆಟ್ಟು ವಂದನಾರ್ಪಣೆ ಸಲ್ಲಿಸಿದರು. ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷ ಪ್ರಶಾಂತ್ ಅನಂತಾಡಿ ನಿರೂಪಿಸಿದರು. ವಿದ್ಯಾರ್ಥಿಗಳನ್ನು ಅಭಿನಂದಿಸಿ, ಸಂಘಟನೆಯ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಂತೆ ಕರೆ ನೀಡಲಾಯಿತು.


