ಉಡುಪಿ, ಜೂನ್ 25: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ಗುರುವಾರ ಸಂಜೆ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಸಂದೇಶ್ ಕಟಪಾಡಿ ಅವರ ಆತಿಥ್ಯದಲ್ಲಿ ಕಟಪಾಡಿಯಲ್ಲಿರುವ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು.

ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಜನಾ ಸಂಕೀರ್ತನೆ ನಡೆಸಿದರು. ಬಳಿಕ ಘಟಕದ ಮಾಜಿ ಅಧ್ಯಕ್ಷ ಭಾಸ್ಕರ್ ಸುವರ್ಣ ಅವರು ಗುರುಗಳಿಗೆ ಮಹಾಪೂಜೆ ನೆರವೇರಿಸಿ, ಎಲ್ಲರಿಗೂ ಮಹಾಪ್ರಸಾದ ವಿತರಿಸಿದರು. ಗುರು ಸಂದೇಶ ನೀಡಿದ ಖ್ಯಾತ ನಿರೂಪಕರು ಹಾಗೂ ಘಟಕದ ಸದಸ್ಯ ತೇಜೇಶ್ ಬಂಗೇರ ಅವರು, “ಗುರುಗಳ ತತ್ವ ಹಾಗೂ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಯಶಸ್ವಿ ಬದುಕನ್ನು ಕಟ್ಟಿಕೊಳ್ಳಬಹುದು” ಎಂದು ಹೇಳಿ, ತಮ್ಮ ಜೀವನದ ಅನುಭವಗಳು ಹಾಗೂ ವಿವಿಧ ಉದಾಹರಣೆಗಳ ಮೂಲಕ ಗುರುಗಳ ಆದರ್ಶಗಳನ್ನು ಪಾಲಿಸುವ ಮಹತ್ವವನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರು ಕಾರ್ಯಕ್ರಮಕ್ಕೆ ಆತಿಥ್ಯ ನೀಡಿದ ಸಂದೇಶ್ ಕಟಪಾಡಿ ಅವರ ಕುಟುಂಬಕ್ಕೆ ಹಾಗೂ ಭಾಗವಹಿಸಿದ ಸದಸ್ಯರು ಮತ್ತು ಹಿತೈಷಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕಾರ್ಯದರ್ಶಿ ವೀಕ್ಷಿತ್ ಅವರು ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು, ಸದಸ್ಯರು, ಊರಿನ ಗಣ್ಯರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು. ಕೊನೆಯಲ್ಲಿ ಸಮೂಹ ಛಾಯಾಚಿತ್ರ ಹಾಗೂ ಉಪಹಾರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.


