ಮಾಣಿ, ಜೂನ್ 25: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಮಜಿ ವೀರಕಂಭ ಶಾಲೆಯ ಮುಖಮಂಟಪದ ಮೇಲ್ಚಾವಣಿಗೆ ಅಳವಡಿಸಲಾದ ಶೀಟ್‌ಗಳ ಸಮರ್ಪಣೆ ಹಾಗೂ ಹಸ್ತಾಂತರ ಕಾರ್ಯಕ್ರಮ ಮತ್ತು “ಯುವ ವೃಕ್ಷೋತ್ಸವ–2026” ಕಾರ್ಯಕ್ರಮವು ಗುರುವಾರ ಶಾಲಾ ಆವರಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಕೊಡಾಜೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಅಧ್ಯಕ್ಷ ಅಶೋಕ್ ಪಡ್ಪು ಮಾತನಾಡಿ, “ಶಾಲೆಗಳ ಅಭಿವೃದ್ಧಿಗೆ ನೀಡುವ ಸಹಕಾರ ಮಕ್ಕಳ ಉಜ್ವಲ ಭವಿಷ್ಯಕ್ಕೆ ನೆರವಾಗುತ್ತದೆ. ಸಮಾಜಮುಖಿ ಕಾರ್ಯಗಳಲ್ಲಿ ಯುವಜನರ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಯುವವಾಹಿನಿಯ ಸೇವಾ ಚಟುವಟಿಕೆಗಳು ಸಮಾಜಕ್ಕೆ ಮಾದರಿಯಾಗಿವೆ” ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಮಾಣಿ ಘಟಕದ ವತಿಯಿಂದ ಶಾಲೆಯ ಅಭಿವೃದ್ಧಿಗಾಗಿ ಒದಗಿಸಲಾದ ಶೀಟ್‌ಗಳನ್ನು ಶಾಲಾ ಆಡಳಿತಕ್ಕೆ ಹಸ್ತಾಂತರಿಸಲಾಯಿತು. ಬಳಿಕ “ಯುವ ವೃಕ್ಷೋತ್ಸವ–2026” ಅಂಗವಾಗಿ ಶಾಲಾ ಆವರಣದಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶ ಸಾರಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ ಮಾಣಿ ಘಟಕದ ಕೋಶಾಧಿಕಾರಿ ತ್ರಿವೇಣಿ ರಮೇಶ್, ಉಪಾಧ್ಯಕ್ಷ ಸುಜಿತ್ ಅಂಚನ್, ಸದಸ್ಯರಾದ ರೇಣುಕಾ ಕಣಿಯೂರು, ಪ್ರಥ್ವಿಕ್ ಜಯಪ್ರಕಾಶ್, ಜನಾರ್ಧನ ಪೂಜಾರಿ ಉಪಸ್ಥಿತರಿದ್ದರು. ಯುವವಾಹಿನಿ ಬಂಟ್ವಾಳ ಘಟಕದ ಸಮಾಜ ಸೇವಾ ನಿರ್ದೇಶಕ ಚಿನ್ನಾ ಕಲ್ಲಡ್ಕ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು. ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ಪೋಷಕರು, ವಿದ್ಯಾರ್ಥಿಗಳು ಹಾಗೂ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ, ಯುವವಾಹಿನಿ ಮಾಣಿ ಘಟಕದ ಸಮಾಜಮುಖಿ ಸೇವಾ ಕಾರ್ಯಗಳನ್ನು ಶ್ಲಾಘಿಸಿದರು.


