ತಲ್ಲಣ, ಹೋರಾಟ ಯಾರಿಗಿಲ್ಲ ಹೇಳಿ ?. ಆದರೆ ಇಲ್ಲಿ ಯೋಚಿಸ ಹೊರಟಿರುವುದು ಮಧ್ಯಮ ವರ್ಗದ ಸುತ್ತ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯನ್ನು ದೃಷ್ಠಿಯಲ್ಲಿ ಇಟ್ಟುಕೊಂಡು ನೋಡಿದರೆ ಇಲ್ಲಿ ಇರುವ ದೊಡ್ಡ ಗುಂಪು ಮಧ್ಯಮ ವರ್ಗದ್ದು. ಬಡವರು ಅಥವಾ ಕಡು ಬಡವರು ಇಲ್ಲ ಎಂದಲ್ಲ .ಅವರ ಸಂಖ್ಯೆ ವಿರಳ. ಬಡವರಿದ್ದರೂ ನೋಡುವವರ ಕಣ್ಣಿಗೆ ಮಧ್ಯಮ ವರ್ಗದಂತೆಯೆ ಕಾಣುತ್ತಾರೆ. ಶ್ರೀಮಂತರೆಂದು ಕಾಣ ಬಯಸುವವರು ಅಥವಾ ಕಾಣುವವರು ಒಳ ಹೊಕ್ಕರೆ ಮಧ್ಯಮ ವರ್ಗದವರೇ ಆಗಿರುತ್ತಾರೆ. ಉತ್ತರ ಕರ್ನಾಟಕಕ್ಕೊ; ಉತ್ತರ ಭಾರತಕ್ಕೊ ಹೋದರೆ ಅಲ್ಲಿ ಕಡು ಬಡವರು, ಬಡವರು, ಶ್ರೀಮಂತರು ಹಾಗೂ ಅತಿ ಶ್ರೀಮಂತರು ಎಂಬ ವರ್ಗಗಳನ್ನು ಕಾಣ ಸಿಗಬಹುದೇನೊ.. ನಮ್ಮಲ್ಲಿ ಇರುವ ಬಹು ದೊಡ್ಡ ಗುಂಪು ಮಧ್ಯಮ ವರ್ಗದ್ದು. ಇಲ್ಲಿ ಮಧ್ಯಮ ವರ್ಗ ಎಂಬುದು ಮುಖ್ಯವಾಗಿ ಆರ್ಥಿಕ ಮಾನದಂಡದಲ್ಲಿ ಗುರುತಿಸುವ ಗುಂಪು. ಇಂದು ಮಧ್ಯಮ ವರ್ಗ ಎಂದು ಗುರುತಿಸುವ ಗುಂಪಿನ ಪೂರ್ವಜರು ಆರೇಳು ದಶಕಗಳ ಹಿಂದೆ ಬಡವರಾಗಿದ್ದರು. ಬಡವರಾಗಿದ್ದರು ಎಂದು ನಾವು ಹಿಂತಿರುಗಿ ನೋಡುವಾಗ ಮೂಡುವ ಭಾವನೆಯಷ್ಟೆ, ವಾಸ್ತವವಾಗಿ ಅದು ಬಡತನವಲ್ಲ ; ಸಹಜ ಜೀವನ. ಅದು ಅನ್ನಮಯ ಜಗತ್ತು. ಹೊಟ್ಟೆಗೆ ಅನ್ನ , ಮಳೆ ಬಿಸಿಲಿನಿಂದ ಪಾರಾಗಲು ಒಂದು ಸೂರು ಇದ್ದರೆ ಅದೇ ಸ್ವರ್ಗ. ಹಣ ಅಷ್ಟೇನು ಮಹತ್ವ ಪಡೆದುಕೊಳ್ಳದ ಕಾಲವದು .ಕೊಂಡುಕೊಳ್ಳಳು ಈಗಿನಂತೆ ಅನಗತ್ಯ ವಸ್ತುಗಳೂ ಇರಲಿಲ್ಲ. ಅದು ಅಗತ್ಯ ಮತ್ತು ಸ್ವಾವಲಂಬನೆಯ ಜೀವನ ಪದ್ಧತಿ.ಎಲ್ಲವೂ ಪ್ರಕೃತಿಯಲ್ಲಿ ಉಚಿತವಾಗಿ ಸಿಗುತಿತ್ತು. ನಿಸರ್ಗ ಧರ್ಮಕ್ಕೆ ಬದ್ಧವಾದ ಬದುಕು. ಮನೆ ಸಣ್ಣದು . ಅಲ್ಲಿದ್ದವರ ಸಂಖ್ಯೆ ದೊಡ್ಡದು, ಅದು ಕೂಡು ಕುಟುಂಬ .ಅಜ್ಜ-ಅಜ್ಜಿ, ಮಕ್ಕಳು-ಮೊಮ್ಮಕ್ಕಳ ಸಮಾಗಮದ ಮಹಾಮನೆ. ಬಹು ನಿರೀಕ್ಷೆಗಳಿಲ್ಲದ. ಅನ್ನಮಯ ಆನಂದಮಯ ಜಗತ್ತು.

ಅದು ಇಲ್ಲಗಳ ಲೋಕ : ಇಂದಿನ ಕಾಲಕ್ಕೆ ಹೋಲಿಸಿ ನೋಡಿದರೆ ಅದು ಇಲ್ಲಗಳ ಲೋಕ. ಮನೆ-ಮನೆಗೆ ರಸ್ತೆಯಾಗಲಿ ; ಓಡಾಡಲು ಸ್ವಂತ ವಾಹನಗಳಾಗಲಿ, ದೂರವಾಣಿ ಸಂಪರ್ಕಗಳಾಗಲಿ, ಕುಳಿತುಕೊಳ್ಳಲು ಮೆತ್ತನೆಯ ಸೋಫಾವಾಗಲಿ ಇಲ್ಲದ ಕಾಲವದು. ವಿದ್ಯುತ್ ಸಂಪರ್ಕವೇ ಇಲ್ಲದ ಮೇಲೆ ಟಿ. ವಿ, ಮಿಕ್ಸಿ, ಫ್ಯಾನ್, ವಾಟರ್ ಕೂಲರ್, ವಾಟರ್ ಹೀಟರ್, ಶವರ್, ಟ್ಯಾಪ್, ಇವುಗಳಿಗೆಲ್ಲಾ ಪ್ರವೇಶವೆ ಇಲ್ಲ. ಅಲ್ಲಿ ಬದುಕು ಸ್ಪರ್ಧೆ ಆಗಿರಲಿಲ್ಲ ಇರುವುದರಲ್ಲೆ ತೃಪ್ತರು. ಪರರೂ ನಮ್ಮಂತೆ . .ಇತರರೊಂದಿಗೆ ಹೋಲಿಸಿ ನೋಡುವ ಮಾತೆಲ್ಲಿ ಬಂತು. ಬಾಯಿ ತುಂಬಾ ಮಾತು- ನಗುವಿಗೆ ದಾರಿದ್ರ್ಯವಿರಲಿಲ್ಲ. ಮನೆಯ ಜಗಲಿ ,ಊರ ಅಂಗಡಿ ಗದ್ದೆಗಳ ಬದು, ಇವೆಲ್ಲಾ ಮಾತು ಮಾತು ಕೂಡುವ ವೇದಿಕೆಗಳು. ವಸ್ತುಗಳ ದೃಷ್ಟಿಯಿಂದ ಅದು ಇಲ್ಲಗಳ ಕಾಲ, ಮನುಷ್ಯ ಸಂಬಂಧ, ಸ್ನೇಹ- ಸಹಕಾರ ಮಾತುಕತೆಯ ದೃಷ್ಟಿಯಿಂದ ಸಂಮೃದ್ಧ ಬದುಕು. ಹಾಗೆಂದ ಮಾತ್ರಕ್ಕೆ ಕೆಟ್ಟದ್ದು ಇರಲೇ ಇಲ್ಲ ಎಂದಲ್ಲ. ಹಸಿವು, ಅಪಮಾನ, ಅಸಮಾನತೆಗಳ ಅಧ್ಯಾಯವೊಂದು ಬೇರೆಯೇ ಇತ್ತು.
ಅನ್ನಮಯ ಜಗತ್ತಿನಿಂದ ಹಣಮಯ ಜಗತ್ತಿಗೆ: ಮನುಷ್ಯನ ಮೂಲ ಕಸುಬು ಬೇಟೆ. ಅದು ಆಹಾರದ ಬೇಟೆ. ವಿಕಾಸಶೀಲ ಮಾನವನಲ್ಲಿ ಬೇಟೆಯ ರೂಪ ಬದಲಾಗಿದೆ. ಬೇಟೆ ಹಾಗೆಯೆ ಮುಂದುವರಿದಿದೆ. ಸ್ಥೂಲವಾಗಿ ಅದು ಆಹಾರದ ಬೇಟೆಯಿಂದ ಹಣದ ಬೇಟೆಗೆ ಬದಲಾಗಿದೆ. ಬದುಕಿನ ಬೇಕುಗಳಲ್ಲಿ ಇಂದು ಆಹಾರವಷ್ಟೆ ಸಾಲದು, ಆಹಾರದಷ್ಟೆ ಇತರ ಅಗತ್ಯಗಳು ಪಟ್ಟಿಯಲ್ಲಿ ಸೇರಿದೆ .ಐಷಾರಾಮವೂ ಅಗತ್ಯವಾಗಿ ಬದಲಾಗಿದೆ .ಹಣವೊಂದು ಒಟ್ಟು ಗೂಡಿದರೆ ಎಲ್ಲಾ ಬೇಕುಗಳನ್ನು ಕೊಂಡುಕೊಳ್ಳಬಹುದಾಗಿದೆ. ಹಣ ಬಹುಪಾಲು ಸಮಸ್ಯೆಗಳನ್ನು ಪರಿಹರಿಸುತ್ತದೆ. ಮನೆ ವಾಸಕ್ಕಾಗಿ ಅಷ್ಟೇ ಅಲ್ಲ, ಅದು ಸೌಂದರ್ಯ, ಪ್ರತಿಷ್ಠೆ ಹಾಗು ಸೌಲಭ್ಯವೂ ಹೌದು. ವಾಹನ ಓಡಾಟಕ್ಕೆ ಅಷ್ಟೆ ಅಲ್ಲ. ಅಗತ್ಯವಿಲ್ಲದಿದ್ದರೂ ನೂರಾರು ವಸ್ತುಗಳು ಮನೆ ಸೇರಿವೆ. ಸಂತೆಯಲ್ಲಿ ಇರುವುದೆಲ್ಲ ಮನೆಯಲ್ಲಿ ಇರಬೇಕೆಂಬ ಭಾವ ! ಉದಾರ ಆರ್ಥಿಕ ನೀತಿ ಮತ್ತು ತಂತ್ರಜ್ಞಾನ ರಂಗದಲ್ಲಾದ ಕ್ಷಿಪ್ರ ಕ್ರಾಂತಿಯ ಪರಿಣಾಮ ಇಂದು ಸಾಮಾಜದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ‘ಮಾರು ಕಟ್ಟೆ’ ಎಂಬುವುದುಪ್ರಭಾವಿ ವ್ಯವಸ್ಥೆ . ಇಂದು ಎಲ್ಲವನ್ನು ಆಳುತ್ತಿರುವುದು ಅದುವೆ. ಶಿಕ್ಷಣ, ಆರೋಗ್ಯ, ಆದ್ಯಾತ್ಮ ಎಲ್ಲವೂ ಇಂದು ಮಾರಾಟದ ಸರಕು. ಇಂತಹುದೆ ಖ್ಯಾತೆ ಬೇಕು ಎಂಬಲ್ಲಿಯೂ ಇರುವುದು ಸೇವೆಯಲ್ಲ ; ಹಣ. .ಮಾರುಕಟ್ಟೆ ಎಂಬ ದೈತ್ಯ ಕಡು ಬಡವನನ್ನು ಅಷ್ಟಾಗಿ ಮುಟ್ಟಿಲ್ಲ , ಶ್ರೀಮಂತನಿಗೂ ತಟ್ಟಿಲ್ಲ. ಆದರೆ ನಲುಗಿದ್ದು ಮಾತ್ರ / ಬಡವ ಶ್ರೀಮಂತನಂತಾಗ ಬಾರದು /ಬಡವ ಶ್ರೀಮಂತನಾಗಬೇಕು. ಬಹುತೇಕ ಆಗುತ್ತಿರುವುದು ಶ್ರೀಮಂತರ ಹಾಗೆ. ನೂರಾರು ಬೇಡಿಕೆಗಳನ್ನು ಈಡೇರಿಸಿಕೊಳ್ಳಬೇಕಾದರೆ ಕೊಂಡು ಕೊಳ್ಳುವ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಒಂದು ವೇಳೆ ಸಂಪಾದನೆ ಯಲ್ಲಿ ಹೆಚ್ಚಳವಾಗದಿದ್ದರೆ ಬೇಕುಗಳಿಗೆ ಮಿತಿ ಹಾಕಿಕೊಳ್ಳಬೇಕು. ವಾಸ್ತವವಾಗಿ ಹಾಗಾಗುತ್ತಿಲ್ಲ. ಶಕ್ತಿ ಮೀರಿ ಸಾಲ ಪಡೆದು ಬೇಕುಗಳನ್ನು ಈಡೇರಿಸಿಕೊಳ್ಳುತ್ತಾರೆ. ತಲೆಗೆ ಭಾರವಾಗುವ ಮನೆ, ಬಿಳಿಯಾನೆಯಂತಹ ಕಾರು, ಇನ್ನು ಶ್ರೀಮಂತರೂ ನಾಚುವಂತೆ ಮಾಡುವ ಮದುವೆ, ಸೀಮಂತ, ಬರ್ತ್ ಡೇಗಳು ಮನುಷ್ಯನನ್ನು ದುಡಿಯುವ ಕತ್ತೆಯಾಗಿಸಿದೆ. ಸಾಲ ನೀಡುವ ಬ್ಯಾಂಕುಗಳೂ ಉದಾರವಾಗಿದೆ. ಇದರಿಂದ ಶ್ರೀಮಂತರಂತೆ ಕಾಣುವ ಬಡವರು ಹೆಚ್ಚಾಗುತ್ತಿದ್ದಾರೆ . ಇದು ಬಡತನಕ್ಕಿಂತಲೂ ಭೀಕರವಾದುದು. ಮನೆ ಸಾಲ ತೀರಿಸಲಾಗದೆ ವಾಸವಿದ್ದ ಮನೆಯನ್ನು ಬಾಡಿಗೆಗೆ ನೀಡಿ ತಾನೂ ಸಣ್ಣ ಮನೆಯ ಬಾಡಿಗೆವಾಸವಾಗಿ ಸಂಕಷ್ಟದಿಂದ ಪಾರಾದವರು ಇದ್ದಾರೆ. ಮಧ್ಯಮ ವರ್ಗದ್ದು ಮರ್ಯಾದೆಯ ಬದುಕು. ಹಣದ ಕೊರತೆಗಿಂತಲೂ ಅದರ ನಿರ್ವಹಣೆಯ ದೋಷ ಹೆಚ್ಚು ಅಪಾಯಕಾರಿ. ಮಾನಸಿಕ ಒತ್ತಡ, ಸುಂದರ ಕುಟುಂಬದ ಮೇಲೆ ಬೀರುವ ಪರಿಣಾಮ ಇವೆಲ್ಲ ಕಣ್ಣಿಗೆ ಕಾಣದ ಸಮಸ್ಯೆಗಳು. ಮಧ್ಯಮ ವರ್ಗದ ಈ ರೀತಿಯ ಸ್ವಯಂಕೃತ-ಅತೃಪ್ತ ಮನಸ್ಥಿತಿ ಒಟ್ಟು ಸಮಾಜದ ಆರೋಗ್ಯವನ್ನು ಕೆಡಿಸಿದೆ. ಜಾತಿ ದ್ವೇಷ, ಮತದ್ವೇಷ, ಭಾಷಾ ದ್ವೇಷಗಳಿಗೆ ಬಲಿಯಾಗುತ್ತಿರುವುದು ಕೂಡ ಈ ವರ್ಗವೇ ಆಗಿದೆ. ದುರ್ಬಲ ಮನಸ್ಸು ವಿಷಕಾರಿ ವಿಷಯವನ್ನು ಸುಖಿಸುತ್ತದೆ. ದ್ವೇಷ ಬಿತ್ತುವುದು ಒಂದು ರಾಜಕೀಯೋದ್ಯಮದ ಭಾಗವೆ ಆಗಿದೆ. ಬಡವ ಶ್ರೀಮಂತನಾಗುವುದು ವರ್ತಮಾನದ ಅನಿವಾರ್ಯ. .ಆಗ ಮಾತ್ರ ಬೇಕಾದುದ್ದನ್ನು ಕೊಂಡುಕೊಳ್ಳಬಹುದು. ಅಥವಾ ಲೋಕದ ಜನ ನೀಡುವ ಶ್ರೀಮಂತನೆಂಬ ಪ್ರಮಾಣ ಪಾತ್ರಕ್ಕಾಗಿ ತಲೆ ಕೆಡಿಸದೆ ಬೇಕುಗಳಿಗೆ ಮಿತಿ ಹಾಕಿ ಬದುಕಬೇಕು. ಈ ಎರಡಕ್ಕೂ ಎದುರಿಸುವ ಮನೋಸ್ತೈರ್ಯ ಬೇಕು .’ ನಾವು ಬಯಸಿದಂತೆ ಬದುಕುವುದು ಸುಲಭದಲ್ಲಿ ದಕ್ಕುವಂತಹುದಲ್ಲ .ಅದು ಹೋರಾಟದಿಂದ ಪಡೆಯುವಂತಹುದು’ ಎಂಬ ಪೂರ್ಣ ಚಂದ್ರ ತೇಜಸ್ವಿಯವರ ಮಾತು ಚಿಂತನಾ ಯೋಗ್ಯ.ಮಧ್ಯಮ ವರ್ಗವು ಶ್ರೀಮಂತ ವರ್ಗವಾಗುವುದೊಂದೆ ಈ ಎಲ್ಲಾ ತಲ್ಲಣಗಳಿಗೆ ಪರಿಹಾರವಲ್ಲ. ನೂರಾರು ಬಗೆಯ ಬದುಕಿನ ಮಾದರಿಗಳನ್ನು ಅರಿವಿಗೆ ತಂದುಕೊಳ್ಳಬೇಕು. ಜೀವನವನ್ನು ನೋಡುವ ಕ್ರಮವನ್ನು ಬದಲಾಯಿಸಬೇಕು. ಆಗ ಈ ಎಲ್ಲಾ ತಲ್ಲಣಗಳಿಗಂದ ಮಧ್ಯಮ ವರ್ಗ ಪಾರಗಬಹುದು. ‘ಮರ್ತ್ಯವೆಂಬುವುದು ಕರ್ತಾರನ ಕಮ್ಮಟವಯ್ಯ’ ಎಂದು ಬಸವಣ್ಣ ಹೇಳಿದ್ದಾರೆ. ಹೀಗೆಂದರೇನು ಎಂದು ಅರ್ಥವಾಗದೆ ಇದ್ದರೂ ಮರ್ತ್ಯದಲ್ಲಿರುವ ಮಧ್ಯಮ ವರ್ಗದ ವಸ್ತುಸ್ಥಿತಿ-ಮನಸ್ಥಿತಿಯ ಅರಿವಾಗಬೇಕು. ಅರಿವಿಗೆ ಪಾತಾಳದಿಂಸ ಮರ್ತ್ಯಲೋಕದ ಮಧ್ಯಮರನ್ನು ಪಾರು ಮಾಡುವ ಗುಣವಿದೆ.
–ಡಾ. ಯೋಗೀಶ ಕೈರೋಡಿ


