ಬಜಪೆ, ಜೂನ್ 21 : ಯುವವಾಹಿನಿ (ರಿ.) ಬಜಪೆ ಘಟಕ ಹಾಗೂ ಲೈಟ್ ಹೌಸ್ ರಾಜಯೋಗ ಮೆಡಿಟೇಶನ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಜೂನ್ 21ರಂದು ದುರ್ಗಾ ಬಜಪೆ,ರೆಸಿಡೆನ್ಸಿಯಲ್ಲಿ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಯುವವಾಹಿನಿ (ರಿ.) ಬಜಪೆ ಘಟಕದ ಅಧ್ಯಕ್ಷ ರೋಹಿತ್ ಪೂಜಾರಿ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಯೋಗ ಸಮಿತಿಯ ಸಂಚಾಲಕಿ ರೇವತಿ ಸನಿಲ್ ಅವರು, ಇಂದಿನ ಒತ್ತಡದ ಜೀವನಶೈಲಿಯಿಂದ ದೂರ ಸರಿದು ಆರೋಗ್ಯ ಮತ್ತು ಮಾನಸಿಕ ನೆಮ್ಮದಿಯನ್ನು ಪಡೆಯಲು ಯೋಗ ಅತ್ಯಂತ ಸಹಕಾರಿಯಾಗಿದೆ ಎಂದು ತಿಳಿಸಿದರು. ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಮೂಲಕ ಯೋಗದ ಮಹತ್ವವನ್ನು ಅರಿತು ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಎಸ್‌ಪಿವೈಎಸ್‌ಎಸ್ (SPYSS) ಜಿಲ್ಲಾ ಸಂಯೋಜಕಿ ಕನಕಾ ಮೋಹನ್ ಅವರು ಯೋಗಾಭ್ಯಾಸದ ಮಹತ್ವದ ಕುರಿತು ಮಾಹಿತಿ ನೀಡಿ, ಪ್ರತಿದಿನ ಯೋಗ ಮಾಡುವುದರಿಂದ ದೇಹ ಮತ್ತು ಮನಸ್ಸು ಆರೋಗ್ಯಕರವಾಗಿರುವುದರ ಜೊತೆಗೆ ದಿನವಿಡೀ ಚುರುಕುತನ ಹಾಗೂ ಶಕ್ತಿಯುತವಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಯೋಗವು ಏಕಾಗ್ರತೆ, ಮನಶಾಂತಿ ಹಾಗೂ ಸಕಾರಾತ್ಮಕ ಚಿಂತನೆಗಳನ್ನು ವೃದ್ಧಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಂಘ ಬಜಪೆಯ ಕೋಶಾಧಿಕಾರಿ ಪದ್ಮನಾಭ ಪೂಜಾರಿ, ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಸುಲೋಚನಾ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿ, ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಯೋಗದ ಮಹತ್ವವನ್ನು ಜನಸಾಮಾನ್ಯರಿಗೆ ತಲುಪಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು.


