ಕೂಳೂರು, ಜೂನ್ 21 : ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 21ರಂದು ಬೆಳಿಗ್ಗೆ 6 ಗಂಟೆಗೆ ಕೂಳೂರಿನ ಫಲ್ಗುಣಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಆರಂಭದಲ್ಲಿ ಶ್ರೀ ನಾರಾಯಣಗುರು ದೇವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪ್ರಾರ್ಥನೆ ಸಲ್ಲಿಸಲಾಯಿತು. ಪತಂಜಲಿ ಯೋಗ ಪ್ರತಿಷ್ಠಾನದ ಖ್ಯಾತ ಯೋಗ ಶಿಕ್ಷಕರಾದ ವಿಶು ಕುಮಾರ್ ಹಾಗೂ ರೇಖಾ ಸಂದೀಪ್ ಅವರು ಘಟಕದ ಸದಸ್ಯರಿಗೆ ಯೋಗಾಸನ ಮತ್ತು ಪ್ರಾಣಾಯಾಮದ ತರಬೇತಿಯನ್ನು ನೀಡಿದರು. ಯೋಗಾಭ್ಯಾಸದ ಮಹತ್ವ, ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಅದರ ಪರಿಣಾಮಗಳ ಕುರಿತು ಅವರು ಮಾಹಿತಿ ನೀಡಿದರು.

ತರಬೇತಿ ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷೆ ಗೀತಾ ವಸಂತ್, ಮಾಜಿ ಅಧ್ಯಕ್ಷ ಭಾಸ್ಕರ್ ಕೋಟ್ಯಾನ್, ಕಾರ್ಯಕ್ರಮದ ಸಂಚಾಲಕಿ ವಿಮಲ ರಾಜೇಶ್, ನಿರ್ದೇಶಕರು ಹಾಗೂ ಸದಸ್ಯರು ಉತ್ಸಾಹದಿಂದ ಭಾಗವಹಿಸಿ ಯೋಗಾಭ್ಯಾಸ ನಡೆಸಿದರು.ಕಾರ್ಯಕ್ರಮದ ಕೊನೆಯಲ್ಲಿ ಕಾರ್ಯದರ್ಶಿ ಧನ್ಯವಾದ ಸಮರ್ಪಿಸಿದರು. ತರಬೇತಿ ನೀಡಿದ ಯೋಗ ಶಿಕ್ಷಕರನ್ನು ಅಧ್ಯಕ್ಷರು ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ತರಬೇತುದಾರರು ಹಾಗೂ ಭಾಗವಹಿಸಿದವರಿಗೆ ಆರೋಗ್ಯಕರ ಆಯುರ್ವೇದ ಶೈಲಿಯ ಉಪಹಾರದ ವ್ಯವಸ್ಥೆ ಮಾಡಲಾಗಿತ್ತು.
ಯೋಗದ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಸಂದೇಶವನ್ನು ಸಾರಿದ ಈ ಕಾರ್ಯಕ್ರಮವು ಯಶಸ್ವಿಯಾಗಿ ನೆರವೇರಿತು


