ಮಂಗಳೂರು, ಜೂನ್ 20 : ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ವತಿಯಿಂದ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ಜೂನ್ 20ರಂದು ಸಂಜೆ 4 ಗಂಟೆಗೆ ಯುವವಾಹಿನಿ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ಅವರು ಯೋಗ ತರಬೇತಿ ನೀಡಲು ಆಗಮಿಸಿದ ಯೋಗಗುರು ಶೈಲಜಾ ನವೀನ್ ಅವರನ್ನು ಆತ್ಮೀಯವಾಗಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶೈಲಜಾ ನವೀನ್ ಅವರು, ಯೋಗವು ಕೇವಲ ಒಂದು ದಿನದ ಆಚರಣೆಗೆ ಸೀಮಿತವಾಗದೇ ಪ್ರತಿದಿನದ ಜೀವನದ ಅವಿಭಾಜ್ಯ ಅಂಗವಾಗಬೇಕು ಎಂದು ಹೇಳಿದರು. ಯೋಗದೊಂದಿಗೆ ಧ್ಯಾನವನ್ನೂ ಅಳವಡಿಸಿಕೊಳ್ಳುವುದರಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ವೃದ್ಧಿಯಾಗುವುದರ ಜೊತೆಗೆ ಸಮತೋಲನಯುತ ಜೀವನಶೈಲಿಯನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಬಳಿಕ ಅವರು ಸದಸ್ಯೆಯರಿಗೆ ವಿವಿಧ ಯೋಗಾಸನಗಳು, ಪ್ರಾಣಾಯಾಮ ಹಾಗೂ ಧ್ಯಾನದ ಪ್ರಾಯೋಗಿಕ ತರಬೇತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಸದಸ್ಯೆಯರು ಉತ್ಸಾಹದಿಂದ ಯೋಗಾಭ್ಯಾಸದಲ್ಲಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷೆಯರಾದ ರಶ್ಮಿ ಕರ್ಕೇರ ಹಾಗೂ ನೈನಾ ವಿಶ್ವನಾಥ್, ಕೋಶಾಧಿಕಾರಿ ಜಯಲಕ್ಷ್ಮಿ ಹಾಗೂ ಘಟಕದ ಸದಸ್ಯೆಯರು ಉಪಸ್ಥಿತರಿದ್ದರು. ಅಂತ್ಯದಲ್ಲಿ ಘಟಕದ ವತಿಯಿಂದ ಯೋಗಗುರು ಶೈಲಜಾ ನವೀನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಪ್ರಥಮ ಉಪಾಧ್ಯಕ್ಷೆ ದೀಪಿಕಾ ಮನೋಜ್ ಅವರು ಧನ್ಯವಾದ ಸಮರ್ಪಿಸಿದರು


