ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ಮಹತ್ವಾಕಾಂಕ್ಷಿ ಸಮಾಜಮುಖಿ ಯೋಜನೆಯಾದ “ಯುವ ಸೇವಾ ಸ್ಪರ್ಶ” ಕಾರ್ಯಕ್ರಮದಡಿ ಮೊದಲನೇ ಸೇವಾ ಹಸ್ತವನ್ನು ಅಗತ್ಯವಿರುವ ಕುಟುಂಬವೊಂದಕ್ಕೆ ವಿತರಿಸಲಾಯಿತು.

ಮಾಣಿ ಗ್ರಾಮದ ದಿವಂಗತ ವೀರಪ್ಪ ಪೂಜಾರಿ ಅವರ ಕುಟುಂಬವು ಆರ್ಥಿಕ ಹಾಗೂ ಆರೋಗ್ಯ ಸಂಬಂಧಿತ ಸಂಕಷ್ಟಗಳನ್ನು ಎದುರಿಸುತ್ತಿದ್ದು, ನಾಲ್ಕು ಹೆಣ್ಣು ಮಕ್ಕಳ ಪೈಕಿ ಮೂವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕುಟುಂಬದ ಒಬ್ಬ ಸದಸ್ಯರು ಮಾತ್ರ ದುಡಿದು ಮನೆಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವ ಈ ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕವು ಮಾನವೀಯ ಸೇವೆಯ ಕೈ ಚಾಚಿತು.

ಯುವವಾಹಿನಿ (ರಿ.) ಮಾಣಿ ಘಟಕದ ಸಮಾಜ ಸೇವಾ ನಿರ್ದೇಶಕರಾದ ಸುರೇಶ್ ಪೂಜಾರಿ ಬಾಕಿಲ ಅವರ ಉಪಸ್ಥಿತಿಯಲ್ಲಿ ಹಾಗೂ ಘಟಕದ ಅಧ್ಯಕ್ಷರಾದ ಗಣೇಶ್ ಸಾಯಿ ಕೊಡಾಜೆ ಅವರ ಅಧ್ಯಕ್ಷತೆಯಲ್ಲಿ ಕುಟುಂಬಕ್ಕೆ ಮೊದಲನೇ ಸೇವಾ ಹಸ್ತವನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಕಾರ್ಯದರ್ಶಿ, ಕೋಶಾಧಿಕಾರಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ಕುಟುಂಬದ ಸಂಕಷ್ಟದಲ್ಲಿ ಪಾಲ್ಗೊಂಡು ಮಾನವೀಯ ಮೌಲ್ಯಗಳ ಸಂದೇಶವನ್ನು ಸಾರಿದರು. ಸಮಾಜದ ಅಶಕ್ತರು ಹಾಗೂ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸುವ ಉದ್ದೇಶದಿಂದ ಆರಂಭಿಸಲಾದ “ಯುವ ಸೇವಾ ಸ್ಪರ್ಶ” ಯೋಜನೆಯು ಯುವವಾಹಿನಿಯ ಸೇವಾ ಮನೋಭಾವದ ಪ್ರತೀಕವಾಗಿದ್ದು, ಮುಂದಿನ ದಿನಗಳಲ್ಲಿಯೂ ಇಂತಹ ಸಮಾಜಮುಖಿ ಕಾರ್ಯಗಳು ನಿರಂತರವಾಗಿ ಮುಂದುವರಿಯಲಿವೆ.


