ಮಾಣಿ : “ಮರದ ನೆರಳು ಬದುಕಿಗೆ ನೆರಳು” ಎಂಬ ಧ್ಯೇಯೋದ್ದೇಶದೊಂದಿಗೆ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಎರಡನೇ ಹಂತದ ಯುವ ವೃಕ್ಷೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಕೆದಿಲ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಬರಿಮಾರು, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೇರಳಕಟ್ಟೆ ಹಾಗೂ ಅಂಗನವಾಡಿ ಕೇಂದ್ರ ಪೆರಾಜೆಗಳಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಮತ್ತು ಹಸಿರು ಪರಿಸರದ ಕುರಿತು ಜಾಗೃತಿ ಮೂಡಿಸಲಾಯಿತು.

ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಸಾಯಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಿಡಗಳನ್ನು ನೆಟ್ಟು ಅವುಗಳ ಸಂರಕ್ಷಣೆ ಹಾಗೂ ಪರಿಸರ ಸಮತೋಲನ ಕಾಪಾಡುವ ಅಗತ್ಯತೆಯ ಬಗ್ಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷ ಸುಜಿತ್ ಅಂಚನ್, ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್, ನಿತಿನ್ ಅಂಗರಾಜೆ, ಸತೀಶ್ ಮುರುವ, ಮಾರಪ್ಪ ಸುವರ್ಣ, ರಾಜೇಶ್ ಬಲ್ಯ, ಬಾಲಕೃಷ್ಣ ದೇಲಬೆಟ್ಟು ಹಾಗೂ ಯುವವಾಹಿನಿಯ ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಪರಿಸರ ಸಂರಕ್ಷಣೆ, ಸಾಮಾಜಿಕ ಸೇವೆ ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯುವವಾಹಿನಿ (ರಿ.) ಮಾಣಿ ಘಟಕವು ನಿರಂತರವಾಗಿ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಈ ಯುವ ವೃಕ್ಷೋತ್ಸವ ಕಾರ್ಯಕ್ರಮವು ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಯಿತು.


