ಕಡಬ : ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ಪ್ರಸಿದ್ಧ ಕೊಟ್ಟಿಯೂರು ಮಹಾದೇವ ದೇವಸ್ಥಾನಕ್ಕೆ ದಿನಾಂಕ 14.06.2026ರಂದು ಭಕ್ತಿಪೂರ್ವಕ ತೀರ್ಥಯಾತ್ರೆಯನ್ನು ಆಯೋಜಿಸಲಾಯಿತು.

ದಿನಾಂಕ 13.06.2026ರಂದು ರಾತ್ರಿ 10:30 ಗಂಟೆಗೆ ಬಳ್ಪದಿಂದ ಸುಬ್ರಹ್ಮಣ್ಯ – ಇರಿಟ್ಟಿ ಮಾರ್ಗವಾಗಿ ವ್ಯಾನ್‌ನಲ್ಲಿ ಪ್ರಯಾಣ ಆರಂಭಿಸಲಾಯಿತು. ಈ ಯಾತ್ರೆಯಲ್ಲಿ ಘಟಕದ ಅಧ್ಯಕ್ಷರು, ನಿಕಟಪೂರ್ವ ಅಧ್ಯಕ್ಷರು, ನಿರ್ದೇಶಕರು, ಬಳ್ಪ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷರು ಸೇರಿದಂತೆ ಸುಮಾರು 26 ಮಂದಿ ಸದಸ್ಯರು ಭಾಗವಹಿಸಿದ್ದರು.
ಮರುದಿನ ಬೆಳಿಗ್ಗೆ ಸುಮಾರು 4:00 ಗಂಟೆಗೆ ಕೊಟ್ಟಿಯೂರು ತಲುಪಿದ ಯಾತ್ರಾರ್ಥಿಗಳು ನಿತ್ಯಕರ್ಮಗಳನ್ನು ಮುಗಿಸಿ ಪವಿತ್ರ ವಾವಲಿ ನದಿಯಲ್ಲಿ ಸ್ನಾನ ಮಾಡಿ, ನದಿಯ ದಡದಲ್ಲಿರುವ ಸ್ವಯಂಭೂ ಲಿಂಗಸ್ವರೂಪಿ ಮಹಾದೇವನ ದರ್ಶನ ಪಡೆದರು. ಭಕ್ತರ ಅಪಾರ ಸಂಖ್ಯೆಯ ನಡುವೆಯೂ ಕೆಲವೇ ನಿಮಿಷಗಳಲ್ಲಿ ದರ್ಶನ ಭಾಗ್ಯ ದೊರೆತಿದ್ದು ಎಲ್ಲರಿಗೂ ವಿಶೇಷ ಅನುಭವವನ್ನು ನೀಡಿತು. ಘಟಕದ ಅಧ್ಯಕ್ಷ ಉಮೇಶ್ ಬಳ್ಪ, ನಿಕಟಪೂರ್ವ ಅಧ್ಯಕ್ಷ ಪ್ರಶಾಂತ್ ಎನ್.ಎಸ್., ಸಮಾಜಸೇವಕ ಡಾ. ರವಿ ಕಕ್ಕೆಪದವು, ಬಳ್ಪ ಬಿಲ್ಲವ ಗ್ರಾಮ ಸಮಿತಿಯ ಅಧ್ಯಕ್ಷ ಚಿನ್ನಪ್ಪ ಪೂಜಾರಿ ಕೊರಪ್ಪಣೆ ಹಾಗೂ ಕಾರ್ಯದರ್ಶಿ ಸತೀಶ್ ಬಳ್ಪ ಅವರ ನೇತೃತ್ವದಲ್ಲಿ ಈ ಪುಣ್ಯಕ್ಷೇತ್ರ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ನಂತರ ಯಾತ್ರಿಕರು ಅಕ್ಕರೆ ಕೊಟ್ಟಿಯೂರು ಕ್ಷೇತ್ರ, ಪರಸ್ಸಿನಿ ಮಡಪ್ಪುರ ಶ್ರೀ ಮುತ್ತಪ್ಪನ್ ದೇವಸ್ಥಾನ ಹಾಗೂ ಮಡಾಯಿಕಾವು ಭಗವತಿ ದೇವಾಲಯಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆದು ಆಧ್ಯಾತ್ಮಿಕ ಸಂತೃಪ್ತಿಯನ್ನು ಅನುಭವಿಸಿದರು.
ಪ್ರತಿ ವರ್ಷ ವೈಶಾಖ ಮಾಸದಲ್ಲಿ ಸುಮಾರು 28 ದಿನಗಳ ಕಾಲ ನಡೆಯುವ ಕೊಟ್ಟಿಯೂರು ಮಹೋತ್ಸವವು ಸಾವಿರಾರು ಭಕ್ತರನ್ನು ಆಕರ್ಷಿಸುತ್ತದೆ. ಪ್ರಕೃತಿಯ ಮಡಿಲಿನಲ್ಲಿ ನೆಲೆಗೊಂಡಿರುವ ಈ ಕ್ಷೇತ್ರವು ಆಧುನಿಕ ವೈಭವಕ್ಕಿಂತಲೂ ಆಧ್ಯಾತ್ಮಿಕತೆ ಮತ್ತು ಶಾಂತಿಗೆ ಹೆಚ್ಚಿನ ಮಹತ್ವ ನೀಡುತ್ತದೆ. ದೇವಾಲಯದ ಸಂಪ್ರದಾಯ, ರೀತಿ-ನೀತಿಗಳನ್ನು ಪಾಲಿಸಿಕೊಂಡು ದರ್ಶನ ಪಡೆದರೆ ಅದು ಜೀವನಪರ್ಯಂತ ನೆನಪಿನಲ್ಲಿ ಉಳಿಯುವ ಅನುಭವವಾಗುತ್ತದೆ. ಹಿಂತಿರುಗುವ ಪ್ರಯಾಣದ ವೇಳೆ ಸದಸ್ಯರು ಹಾಗೂ ಕುಟುಂಬದವರಿಂದ ಅಭಿಪ್ರಾಯ ಮತ್ತು ಸಲಹೆಗಳನ್ನು ಸಂಗ್ರಹಿಸಲಾಯಿತು. ಅವುಗಳನ್ನು ಪರಿಗಣಿಸಿ ಮುಂದಿನ ವರ್ಷ ಇನ್ನಷ್ಟು ಉತ್ತಮ ರೀತಿಯಲ್ಲಿ “ಕ್ಷೇತ್ರ ದರ್ಶನ – 2027” ಕಾರ್ಯಕ್ರಮವನ್ನು ಆಯೋಜಿಸುವ ಸಂಕಲ್ಪದೊಂದಿಗೆ ಯಾತ್ರೆ ಯಶಸ್ವಿಯಾಗಿ ಸಂಪನ್ನಗೊಂಡಿತು.


