
ಮಂಗಳೂರು : ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಹಾಗೂ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ನಡೆದ ಮಹಿಳಾ ಆರೋಗ್ಯ, ಋತುಬಂಧ ಮತ್ತು ಕ್ಯಾನ್ಸರ್ ತಡೆ ಅರಿವು ಕಾರ್ಯಕ್ರಮದಲ್ಲಿ, ಋತುಬಂಧದ ಸಂದರ್ಭದಲ್ಲಿ ಉಂಟಾಗುವ ದೈಹಿಕ ಹಾಗೂ ಮಾನಸಿಕ ಬದಲಾವಣೆಗಳು, ಕ್ಯಾನ್ಸರ್ ತಡೆಗೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳು, ನಿಯಮಿತ ತಪಾಸಣೆಯ ಮಹತ್ವ ಹಾಗೂ ಆರೋಗ್ಯಕರ ಜೀವನಶೈಲಿಯ ಅಗತ್ಯತೆಯ ಕುರಿತು ಸಂಪನ್ಮೂಲ ವ್ಯಕ್ತಿ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಮಾಹಿತಿ ನೀಡಿದರು. 40 ವರ್ಷಗಳ ಬಳಿಕ ಮಹಿಳೆಯರು ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಕ್ಯಾಲ್ಸಿಯಂ ಪೂರಕಗಳ ಸೇವನೆ ಹಾಗೂ ಅಗತ್ಯ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ತಿಳಿಸಿದರು. ಕ್ಯಾನ್ಸರ್ ಅನ್ನು ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿ ಚಿಕಿತ್ಸೆ ಪಡೆದರೆ ಗುಣಪಡಿಸಬಹುದೆಂದು ಅವರು ಹೇಳಿದರು.

13-06-2026ರಂದು ಶನಿವಾರ ಮಧ್ಯಾಹ್ನ 3 ಗಂಟೆಗೆ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ವನಿತಾಂಗಣದಲ್ಲಿ ಮಹಿಳಾ ಆರೋಗ್ಯ, ಋತುಬಂಧ ಮತ್ತು ಕ್ಯಾನ್ಸರ್ ತಡೆ ಅರಿವು ಕಾರ್ಯಕ್ರಮ ನಡೆಯಿತು.
ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್ ದೀಪ ಪ್ರಜ್ವಲನೆಗೈದು ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ (ರಿ) ಅಧ್ಯಕ್ಷೆ ಚಂಚಲ ತೇಜೋಮಯ ವಹಿಸಿದ್ದರು. ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಡಾ. ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಮಹಿಳಾ ಆರೋಗ್ಯ ಜಾಗೃತಿ ಕುರಿತು ಉಪಯುಕ್ತ ಮಾಹಿತಿ ನೀಡಿದರು. ಮಹಿಳಾ ಮಂಡಲಗಳ ಒಕ್ಕೂಟದ ಉಪಾಧ್ಯಕ್ಷೆ ಮನೋರಮಾ, ಗೌರವಾಧ್ಯಕ್ಷೆ ಜಯಲಕ್ಷ್ಮಿ, ಕಾರ್ಯದರ್ಶಿ ರೇಖಾ ಶೆಟ್ಟಿ, ಕೋಶಾಧಿಕಾರಿ ಭಾರತಿ ಎಂ ಹಾಗೂ ಮಹಿಳಾ ಘಟಕದ ಕಾರ್ಯದರ್ಶಿ ಸೋನಿಯಾ ರಾಜ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.


