ಕೂಳೂರು : ಕೇರಳದ ಕಣ್ಣೂರು ಜಿಲ್ಲೆಯಲ್ಲಿರುವ ಕೊಟ್ಟಿಯೂರು ಮಹಾದೇವ ದೇವಸ್ಥಾನವು ಅತ್ಯಂತ ಪವಿತ್ರ ಹಾಗೂ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾಗಿದ್ದು, ತನ್ನ ಆಧ್ಯಾತ್ಮಿಕ ಮಹತ್ವದಿಂದ ಭಕ್ತರಿಗೆ ವಿಶಿಷ್ಟ ಅನುಭವವನ್ನು ನೀಡುತ್ತಿದೆ. ಈ ಪುಣ್ಯಕ್ಷೇತ್ರಕ್ಕೆ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ವಿಶೇಷ ತೀರ್ಥಯಾತ್ರೆಯನ್ನು ಆಯೋಜಿಸಲಾಯಿತು.

ಜೂನ್ 6, 2026ರಂದು ರಾತ್ರಿ 10.00 ಗಂಟೆಗೆ ಕೂಳೂರಿನಿಂದ ಬಸ್ಸಿನ ಮೂಲಕ ಯಾತ್ರೆ ಆರಂಭಗೊಂಡಿತು. ಈ ಯಾತ್ರೆಯಲ್ಲಿ ಘಟಕದ ಮಾಜಿ ಅಧ್ಯಕ್ಷರು, ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಸೇರಿದಂತೆ ಸುಮಾರು 40 ಮಂದಿ ಭಾಗವಹಿಸಿದ್ದರು. ಮರುದಿನ ಬೆಳಿಗ್ಗೆ ಸುಮಾರು 4.00 ಗಂಟೆಗೆ ಕೊಟ್ಟಿಯೂರು ತಲುಪಿದ ಯಾತ್ರಿಕರು ನಿತ್ಯಕರ್ಮಗಳನ್ನು ಮುಗಿಸಿ, ಪವಿತ್ರ ವಾವಲಿ ನದಿಯಲ್ಲಿ ಸ್ನಾನ ಮಾಡಿ ಮಹಾದೇವನ ದರ್ಶನಕ್ಕೆ ತೆರಳಿದರು. ನದಿಯ ದಡದಲ್ಲಿರುವ ತೇವಭರಿತ ಮಣ್ಣಿನ ಗುಡಿಯಲ್ಲಿ ಸ್ವಯಂಭೂ ಲಿಂಗಸ್ವರೂಪಿಯಾಗಿ ನೆಲೆಸಿರುವ ಪರಮಶಿವನ ದರ್ಶನ ಪಡೆದ ಭಕ್ತರು ಅಪಾರ ಭಕ್ತಿಭಾವದಿಂದ ಪ್ರಾರ್ಥನೆ ಸಲ್ಲಿಸಿದರು. ಭಗವಂತನ ಕೃಪೆಯಂತೆ ಕೆಲವೇ ನಿಮಿಷಗಳ ನಿರೀಕ್ಷೆಯಲ್ಲೇ ದರ್ಶನ ಭಾಗ್ಯ ದೊರೆತದ್ದು ಯಾತ್ರಿಕರಿಗೆ ವಿಶೇಷ ಅನುಭವವಾಗಿ ಉಳಿಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಹಾಗೂ ಯಶವಂತ ಪೂಜಾರಿ ಅವರು ಅಮೂಲ್ಯ ಸಲಹೆ ಮತ್ತು ಮಾರ್ಗದರ್ಶನ ನೀಡಿ ಸಹಕರಿಸಿದರು. ಘಟಕದ ಅಧ್ಯಕ್ಷೆ ಗೀತಾ ವಸಂತ್ ಹಾಗೂ ಕುಟುಂಬ ಸಂಪರ್ಕ ನಿರ್ದೇಶಕಿ ಹರಿಣಿ ಮಾಲೆಮಾರ್ ಅವರ ನೇತೃತ್ವದಲ್ಲಿ ಈ ಪುಣ್ಯಕ್ಷೇತ್ರ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಲಾಯಿತು.ನಂತರ ಯಾತ್ರಿಕರು ಅಕ್ಕರೆ ಕೊಟ್ಟಿಯೂರು ಕ್ಷೇತ್ರಕ್ಕೆ ಭೇಟಿ ನೀಡಿ, ಉಪಹಾರ ಸೇವಿಸಿದ ಬಳಿಕ ಪರಸ್ಸಿನಿಕ್ಕಡವು ಶ್ರೀ ಮುತ್ತಪ್ಪನ್ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಬಳಿಕ ಮಂಗಳೂರಿನತ್ತ ಪ್ರಯಾಣ ಮುಂದುವರಿಸಲಾಯಿತು. ಪ್ರತಿ ವರ್ಷ ವೈಶಾಖ ಮಾಸದಲ್ಲಿ ಸುಮಾರು 28 ದಿನಗಳ ಕಾಲ ಮಾತ್ರ ಕೊಟ್ಟಿಯೂರಿನಲ್ಲಿ ವಿಶೇಷ ಪೂಜಾ ಕೈಂಕರ್ಯಗಳು ನಡೆಯುತ್ತವೆ. “ದಕ್ಷಿಣ ಕಾಶಿ” ಎಂದೇ ಖ್ಯಾತಿ ಪಡೆದಿರುವ ಈ ಕ್ಷೇತ್ರವು ಆಧುನಿಕ ವೈಭವಗಳಿಗಿಂತಲೂ ಪ್ರಕೃತಿ ಮಡಿಲಿನಲ್ಲಿರುವ ತನ್ನ ಸಾಂಪ್ರದಾಯಿಕ ವಾತಾವರಣದ ಮೂಲಕ ಭಕ್ತರಿಗೆ ಮಾನಸಿಕ ಶಾಂತಿ ಹಾಗೂ ಆಧ್ಯಾತ್ಮಿಕ ಅನುಭವವನ್ನು ನೀಡುತ್ತದೆ.
ದೇವಾಲಯದ ನಿಯಮ-ನಿಷ್ಠೆಗಳನ್ನು ಪಾಲಿಸಿಕೊಂಡು ಭಕ್ತಿಭಾವದಿಂದ ದರ್ಶನ ಪಡೆದರೆ ಆ ಅನುಭವ ಜೀವನದ ಸ್ಮೃತಿಪಟಲದಲ್ಲಿ ಅಚ್ಚಳಿಯದೆ ಉಳಿಯುತ್ತದೆ ಎಂಬುದು ಯಾತ್ರಿಕರ ಅಭಿಪ್ರಾಯವಾಗಿದೆ. ಹಿಂತಿರುಗುವ ಪ್ರಯಾಣದ ವೇಳೆ ಸದಸ್ಯರು ಹಾಗೂ ಕುಟುಂಬದವರು ತಮ್ಮ ಅನುಭವಗಳು ಮತ್ತು ಸಲಹೆಗಳನ್ನು ಹಂಚಿಕೊಂಡರು. ಅವುಗಳನ್ನು ಪರಿಗಣಿಸಿ ಮುಂದಿನ ದಿನಗಳಲ್ಲಿ ಇನ್ನಷ್ಟು ಅರ್ಥಪೂರ್ಣ ಹಾಗೂ ಯಶಸ್ವಿ “ಕ್ಷೇತ್ರ ದರ್ಶನ–2026” ಕಾರ್ಯಕ್ರಮಗಳನ್ನು ಆಯೋಜಿಸುವ ಸಂಕಲ್ಪವನ್ನು ಘಟಕ ಕೈಗೊಂಡಿದೆ.


