ಶಕ್ತಿನಗರ : ವರ್ಷದಲ್ಲಿ ಕೇವಲ 28 ದಿನಗಳ ಕಾಲ ಮಾತ್ರ ದರ್ಶನಕ್ಕೆ ಅವಕಾಶವಿರುವ ಈ ಪುಣ್ಯಕ್ಷೇತ್ರಕ್ಕೆ ತೆರಳಲು ಜೂನ್ 6, 2026ರಂದು ಶನಿವಾರ ರಾತ್ರಿ 10.45 ಗಂಟೆಗೆ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ನಿರ್ದೇಶಕರು ಹಾಗೂ ಸದಸ್ಯರು ಸೇರಿದಂತೆ ಸುಮಾರು 33 ಮಂದಿ ನಾಲ್ಯಪದವು ಶಕ್ತಿನಗರ ಶಾಲೆಯ ಬಳಿ ಸೇರಿದರು. ಪ್ರಯಾಣ ಆರಂಭಿಸುವ ಮುನ್ನ ಎಲ್ಲರೂ ಗುರುಗಳಿಗೆ ಪ್ರಾರ್ಥನೆ ಸಲ್ಲಿಸಿ, ಮಹಾದೇವನ ದರ್ಶನದ ಸಂಕಲ್ಪದೊಂದಿಗೆ ಯಾತ್ರೆಯನ್ನು ಆರಂಭಿಸಿದರು.

ಮರುದಿನ ಬೆಳಿಗ್ಗೆ ಸುಮಾರು 4.30 ಗಂಟೆಗೆ ಕೊಟ್ಟಿಯೂರು ತಲುಪಿದ ಯಾತ್ರಿಕರು ನಿತ್ಯಕರ್ಮಗಳನ್ನು ಮುಗಿಸಿ, ಬಾವಲಿ ನದಿ ತೀರದಲ್ಲಿರುವ ಪವಿತ್ರ ಕ್ಷೇತ್ರಕ್ಕೆ ಭೇಟಿ ನೀಡಿ ಲಕ್ಷಾಂತರ ಭಕ್ತರ ನಡುವೆ ಸ್ವಯಂಭೂ ಲಿಂಗದ ದರ್ಶನ ಪಡೆದು ಮಹಾದೇವನ ಕೃಪೆಗೆ ಪಾತ್ರರಾದರು.
ನಂತರ ಮಧ್ಯಾಹ್ನದ ಊಟೋಪಚಾರಗಳನ್ನು ಮುಗಿಸಿ, ಕೇರಳದ ಕಾಸರಗೋಡು ಜಿಲ್ಲೆಯ ಪಲ್ಲಿಕೆರೆಯಲ್ಲಿರುವ ಐತಿಹಾಸಿಕ ಬೇಕಲ್ ಕೋಟೆಗೆ ಭೇಟಿ ನೀಡಿದರು. ಅಲ್ಲಿನ ಸುಂದರ ಹಾಗೂ ರಮಣೀಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಿದ ಬಳಿಕ, ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನಕ್ಕೆ ತೆರಳಿ ವಿಘ್ನನಿವಾರಕನ ದರ್ಶನ ಪಡೆದರು.
ಯಾತ್ರೆಯ ಅವಧಿಯಲ್ಲಿ ಬಸ್ಸಿನಲ್ಲಿಯೇ ವಿವಿಧ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಯಾತ್ರಿಕರು ಉತ್ಸಾಹದಿಂದ ಭಾಗವಹಿಸಿದರು. ಸದಸ್ಯರ ಸಂಪೂರ್ಣ ಸಹಕಾರದೊಂದಿಗೆ ಕೊಟ್ಟಿಯೂರು ಯಾತ್ರೆಯು ಅತ್ಯಂತ ಯಶಸ್ವಿಯಾಗಿ ನೆರವೇರಿತು. ಯಾತ್ರಿಕರ ಅನುಭವ ಹಂಚಿಕೆ ಕಾರ್ಯಕ್ರಮದೊಂದಿಗೆ ಸಮಾರೋಪಗೊಂಡ ಸಭೆಯಲ್ಲಿ ಘಟಕದ ಕಾರ್ಯದರ್ಶಿ ಪ್ರತಿಭಾ ಶಶಿರಾಜ್ ಅವರು ಎಲ್ಲರಿಗೂ ಧನ್ಯವಾದ ಸಲ್ಲಿಸಿದರು. ಈ ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ಪ್ರವಾಸ ಸಂಚಾಲಕರಾದ ಶಶಿರಾಜ್ ಕೋಟ್ಯಾನ್ ಹಾಗೂ ಘಟಕದ ಅಧ್ಯಕ್ಷ ತೇಜಸ್ ವಿ. ಪೂಜಾರಿ ಮತ್ತು ಕಾರ್ಯದರ್ಶಿ ಪ್ರತಿಭಾ ಶಶಿರಾಜ್ ವಹಿಸಿಕೊಂಡಿದ್ದರು.


