ಕಡಬ : ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ದಿನಾಂಕ 05-06-2026ರಂದು ವಿಶ್ವ ಪರಿಸರ ದಿನಾಚರಣೆ ಹಾಗೂ ಬಳ್ಪ ಶಾಲಾ ಮಕ್ಕಳಿಗೆ ಉಚಿತ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಯುವವಾಹಿನಿ (ರಿ.) ಕಡಬ ಘಟಕ ಮತ್ತು ಗ್ರಾಮ ಅರಣ್ಯ ಸಮಿತಿ ಬಳ್ಪ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಉತ್ಸಾಹದಿಂದ ಭಾಗವಹಿಸಿದರು. ಕಾರ್ಯಕ್ರಮವನ್ನು ಪಂಜ ವಲಯದ ಉಪ ವಲಯ ಅರಣ್ಯ ಅಧಿಕಾರಿಗಳಾದ ಮಹಬೂಬ್ ಇಲಾ ಅವರು ಉದ್ಘಾಟಿಸಿ, ಪರಿಸರ ಸಂರಕ್ಷಣೆಯ ಮಹತ್ವ ಹಾಗೂ ಪ್ರತಿಯೊಬ್ಬರ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಿದರು.

ಬಳಿಕ ಯುವವಾಹಿನಿ (ರಿ.) ಕಡಬ ಘಟಕದ ವತಿಯಿಂದ ಬಳ್ಪ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕಗಳು ಹಾಗೂ ಕಂಪಾಸ್ ಪೆಟ್ಟಿಗೆಗಳನ್ನು ವಿತರಿಸಲಾಯಿತು. ಘಟಕದ ಅಧ್ಯಕ್ಷರು ಅಧ್ಯಕ್ಷೀಯ ಭಾಷಣ ಮಾಡಿ, ವಿದ್ಯಾರ್ಥಿಗಳಲ್ಲಿ ಪರಿಸರ ಪ್ರಜ್ಞೆ ಮೂಡಿಸುವುದರೊಂದಿಗೆ ಪರಿಸರ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಸ್ಪೂರ್ತಿ ತುಂಬಿದರು. ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷೆ ಸರಿತಾ ಉಂಡಿಲ, ನಾರಾಯಣಗುರು ತತ್ವ ಮತ್ತು ಪ್ರಚಾರ ಅನುಷ್ಠಾನ ನಿರ್ದೇಶಕರಾದ ಜಯಪ್ರಕಾಶ್ ದೋಳ, ಬಳ್ಪ ವಲಯ ಸಂಘಟನಾ ಕಾರ್ಯದರ್ಶಿ ತುಳಸಿ ಪಡ್ಕಿಲಾಯ, ಕ್ರೀಡಾ ನಿರ್ದೇಶಕಿ ನೇತ್ರಾವತಿ ಹೊಪ್ಪಾಳೆ, ಕಾರ್ಯದರ್ಶಿ ಸತೀಶ್ ಬಳ್ಪ ಹಾಗೂ ಘಟಕದ ಸದಸ್ಯರು ಉಪಸ್ಥಿತರಿದ್ದರು.
ಬಳ್ಪ ಶಾಲೆಯ ವಿದ್ಯಾರ್ಥಿನಿಯರು ಪರಿಸರ ಗೀತೆಯನ್ನು ಹಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಹ ಶಿಕ್ಷಕಿ ಲೋಲಾಕ್ಷಿ ಅವರು ಧನ್ಯವಾದ ಸಮರ್ಪಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಗಿಡ ನೆಡುವ ಮೂಲಕ ಪರಿಸರ ಸಂರಕ್ಷಣೆಯ ಸಂದೇಶವನ್ನು ಸಾರಲಾಯಿತು.ಈ ಕಾರ್ಯಕ್ರಮವು ಪರಿಸರ ಜಾಗೃತಿ ಮೂಡಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಿಸರದ ಬಗ್ಗೆ ಕಾಳಜಿ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಬೆಳೆಸುವಲ್ಲಿ ಯಶಸ್ವಿಯಾಯಿತು.


