ಬಜಪೆ: ಯುವವಾಹಿನಿ (ರಿ.) ಬಜಪೆ ಘಟಕದ ವತಿಯಿಂದ ‘ಮನೆ ಮನೆ ಭಜನೆ’ ಸರಣಿಯ ಅಂಗವಾಗಿ ಘಟಕದ ಸಕ್ರಿಯ ಸದಸ್ಯರಾದ ರಾಘವೇಂದ್ರ ಪೂಜಾರಿ ಹಾಗೂ ತಾರಾವತಿ ದಂಪತಿಗಳ ರಜತ ಮಹೋತ್ಸವದ (25ನೇ ವರ್ಷದ) ವಿವಾಹ ವಾರ್ಷಿಕೋತ್ಸವದ ಪ್ರಯುಕ್ತ ಅವರ ನಿವಾಸದಲ್ಲಿ ಭಜನಾ ಸಂಕೀರ್ತನಾ ಕಾರ್ಯಕ್ರಮವು ಅತ್ಯಂತ ಭಕ್ತಿಭಾವದಿಂದ ನೆರವೇರಿತು.

ಇದೇ ಸುಸಂದರ್ಭದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ಅರ್ಚಕರಾದ ನವೀನ್ ಶಾಂತಿ ಅವರ ಪೌರೋಹಿತ್ಯದಲ್ಲಿ ಭಕ್ತಿಪೂರ್ವಕ “ದುರ್ಗಾ ನಮಸ್ಕಾರ ಪೂಜೆ”ಯು ಸಂಪನ್ನಗೊಂಡಿತು. ಧಾರ್ಮಿಕ ವಿಧಿವಿಧಾನಗಳ ನಂತರ ಯುವವಾಹಿನಿ ಘಟಕದ ವತಿಯಿಂದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿರುವ ದಂಪತಿಗಳಿಗೆ ಫಲಪುಷ್ಪ ನೀಡಿ, ಶಾಲು ಹೊದಿಸಿ ಮಂಗಲ ಹಾರೈಕೆಗಳೊಂದಿಗೆ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ, ಭಜನಾ ಸಂಚಾಲಕರಾದ ದಿವ್ಯ ಸುನಿಲ್, ಘಟಕದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದು, ಭಜನೆಯಲ್ಲಿ ಪಾಲ್ಗೊಂಡು ತದನಂತರ ಮಹಾಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.


