ಯಡ್ತಾಡಿ: ಯುವವಾಹಿನಿ (ರಿ.) ಯಡ್ತಾಡಿ ಘಟಕದ ವತಿಯಿಂದ ಮಹಿಳಾ ದಿನಾಚರಣೆಯ ಅಂಗವಾಗಿ ಸಾಧಕ ಮಹಿಳೆಯರನ್ನು ಗೌರವಿಸುವ ಕಾರ್ಯಕ್ರಮವನ್ನು ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಪೂಜಾರಿ ಅವರ ನಿವಾಸದಲ್ಲಿ ಮಾಸಿಕ ಸಭೆಯೊಂದಿಗೆ ಆಯೋಜಿಸಲಾಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಘಟಕದ ಮಾಜಿ ಅಧ್ಯಕ್ಷರಾದ ರಾಜು ಪೂಜಾರಿ ಅವರು, ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಿ ಸುಸಂಸ್ಕೃತ ಸಮಾಜ ನಿರ್ಮಾಣ ಮಾಡುವಲ್ಲಿ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಮಹಿಳೆಯರು ಕುಟುಂಬ ಮತ್ತು ಸಮಾಜದ ಶಕ್ತಿಯಾಗಿದ್ದು, ಅವರ ಸಾಧನೆಗಳು ಇತರರಿಗೆ ಪ್ರೇರಣೆಯಾಗಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಉಡುಪಿ ನೌಕರರ ಸಂಘದ ಕ್ರೀಡಾಕೂಟದಲ್ಲಿ ಸಾಧನೆಗೈದ ಘಟಕದ ಉಪಾಧ್ಯಕ್ಷರಾದ ಪ್ರತಿಮಾ ರಮೇಶ್ ಅವರನ್ನು ಹಾಗೂ ಜಿಲ್ಲಾಮಟ್ಟದ ಕಥೆ ಹೇಳುವ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಬಹುಮಾನ ಪಡೆದ ಪ್ರಣೀತಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಅಲ್ಲದೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಹುಮಾನ ಪಡೆದ ಘಟಕದ ಸದಸ್ಯರನ್ನೂ ಅಭಿನಂದಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರಾದ ಅಜಿತ್ ಕುಮಾರ್, ಕಾರ್ಯದರ್ಶಿಯಾದ ಗಣೇಶ್ ಪೂಜಾರಿ, ಮಹಿಳಾ ಸಂಘಟನಾ ನಿರ್ದೇಶಕರಾದ ಉಷಾ ಪೂಜಾರಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.



