ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಸನ್ಮಾನ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರನ್ನು ಯುವವಾಹಿನಿ ಸಂಸ್ಥೆಯ ನಿಯೋಗ ಇತ್ತೀಚೆಗೆ ಭೇಟಿಯಾಗಿ, ಸಂಸ್ಥೆಯ ವತಿಯಿಂದ ಗೌರವಪೂರ್ವಕ ಕೃತಜ್ಞತಾ ಪತ್ರವನ್ನು ಹಸ್ತಾಂತರಿಸಿದರು.

ಯುವವಾಹಿನಿ ಸಂಸ್ಥೆಯು ಅತ್ಯಂತ ಯಶಸ್ವಿಯಾಗಿ ಆಯೋಜಿಸಿದ್ದ ‘ಡೆನ್ನಾನ ಡೆನ್ನನ’ ಸಾಂಸ್ಕೃತಿಕ ಹಬ್ಬದಲ್ಲಿ ಸಂಸದರು ಸಕ್ರಿಯವಾಗಿ ಭಾಗವಹಿಸಿ, ಕಾರ್ಯಕ್ರಮದ ಯಶಸ್ಸಿಗೆ ಆರ್ಥಿಕ ಸಹಕಾರವನ್ನು ನೀಡಿದ್ದರು. ಅವರ ಈ ಪ್ರೋತ್ಸಾಹ ಮತ್ತು ಬೆಂಬಲಕ್ಕೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಈ ಭೇಟಿಯನ್ನು ಹಮ್ಮಿಕೊಳ್ಳಲಾಗಿತ್ತು.

ಇದೇ ಸಂದರ್ಭದಲ್ಲಿ ಸಂಸ್ಥೆಯ ಹೆಮ್ಮೆಯ ನಡೆ ಹಾಗೂ ಸಾಧನೆಗಳನ್ನು ಒಳಗೊಂಡ ‘38 ವರ್ಷಗಳ ಸಾಧನೆಯ ಹೊತ್ತಗೆ’ ಯನ್ನು ಸಂಸದರಿಗೆ ಗೌರವಪೂರ್ವಕವಾಗಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಯುವಾವಹಿನಿ ಬಂಟ್ವಾಳ ಘಟಕದ ಅಧ್ಯಕ್ಷರಾದ ನಾಗೇಶ್ ಪೂಜಾರಿ ನೈಬೆಲು, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಹರೀಶ್ ಕೆ. ಪೂಜಾರಿ, ಸಾಮಾಜಿಕ ಜಾಲತಾಣ ಸಂಪಾದಕರಾದ ರಾಜೇಶ್ ಸುವರ್ಣ, ಕೇಂದ್ರ ಸಮಿತಿಯ ಸಾಂಸ್ಕೃತಿಕ ನಿರ್ದೇಶಕರಾದ ದಿನೇಶ್ ಸುವರ್ಣ ರಾಯಿ, ಉಪಸ್ಥಿತರಿದ್ದರು.


