ಬಜಪೆ, ಮೇ 26: ಯುವವಾಹಿನಿ (ರಿ.) ಬಜಪೆ ಘಟಕ, ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ–ಕರಂಬಾರು ಹಾಗೂ ಭಾರತೀಯ ಅಂಚೆ ಇಲಾಖೆ, ಮಂಗಳೂರು ವಿಭಾಗ ಇವರ ಸಹಯೋಗದಲ್ಲಿ ಅಂಚೆ ಜನಸಂಪರ್ಕ ಅಭಿಯಾನ, ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಶಿಬಿರವನ್ನು 26-05-2026 ರಂದು ನಾರಾಯಣ ಗುರು ಸಮುದಾಯ ಭವನ, ಬಜಪೆಯಲ್ಲಿ ಯಶಸ್ವಿಯಾಗಿ ಆಯೋಜಿಸಲಾಯಿತು.

ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ನಡೆದ ಶಿಬಿರದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇವೆಗಳೊಂದಿಗೆ ಅಂಚೆ ಕಚೇರಿಯ ವಿವಿಧ ಜನಪರ ಯೋಜನೆಗಳ ಕುರಿತು ಮಾಹಿತಿ ಮತ್ತು ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸಲಾಯಿತು. ಶಿಬಿರದಲ್ಲಿ 110ಕ್ಕೂ ಹೆಚ್ಚು ಮಂದಿ ಸಾರ್ವಜನಿಕರು ಭಾಗವಹಿಸಿ ಆಧಾರ್ ತಿದ್ದುಪಡಿ, ಅಂಚೆ ಕಚೇರಿ ಸಣ್ಣ ಉಳಿತಾಯ ಯೋಜನೆಗಳು, ಸಮಗ್ರ ರಕ್ಷಣಾ ಯೋಜನೆ (ಅಪಘಾತ ವಿಮೆ), ಪೋಸ್ಟಲ್ ಲೈಫ್ ಇನ್ಶೂರೆನ್ಸ್ ಹಾಗೂ ಪ್ಲೆಕ್ಸಿ ಹೆಲ್ತ್ ಪ್ರೊಟೆಕ್ಟ್ ಪ್ಲಾನ್ ಸೂಪರ್ ಟಾಪ್-ಅಪ್ ಆರೋಗ್ಯ ವಿಮೆ ಸೇರಿದಂತೆ ವಿವಿಧ ಸೇವೆಗಳ ಪ್ರಯೋಜನ ಪಡೆದರು.

ಕಾರ್ಯಕ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರು ಸಮಾಜ ಸೇವಾ ಸಂಘ (ರಿ.) ಬಜಪೆ–ಕರಂಬಾರು ಇದರ ಅಧ್ಯಕ್ಷರಾದ ಶಿವರಾಮ ಪೂಜಾರಿ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ಅಂಚೆ ಅಭಿವೃದ್ಧಿ ಅಧಿಕಾರಿ ಯತೀನ್ ಕುಮಾರ್ ಹಾಗೂ ಅಂಚೆ ಮಾರುಕಟ್ಟೆ ಅಧಿಕಾರಿ ಸುಭಾಷ್ ಪಿ. ಸಾಲ್ಯಾನ್ ಅವರು ಅಂಚೆ ಇಲಾಖೆಯ ಜನಪರ ಯೋಜನೆಗಳು ಹಾಗೂ ಶಿಬಿರದ ಉದ್ದೇಶ ಮತ್ತು ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಬಜಪೆ ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ, ಸಹಾಯಕ ಅಂಚೆ ಅಧೀಕ್ಷಕರಾದ ಕೃಷ್ಣರಾಜ ವಿಠ್ಠಲ ಭಟ್, ಅಂಚೆ ಮೇಲ್ವಿಚಾರಕರಾದ ಪದ್ಮನಾಭ ಪೂಜಾರಿ, ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷರು ಮತ್ತು ಸದಸ್ಯರು, ಬಜಪೆ ಬಿಲ್ಲವ ಸಂಘದ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರೋಹಿತ್ ಪೂಜಾರಿ ಅವರು ಸ್ವಾಗತಿಸಿದರು. ಸುಚಿತ ದೇವರಾಜ್ ಅವರು ಧನ್ಯವಾದ ಸಮರ್ಪಿಸಿದರು.


