ಮಂಗಳೂರು, ಮೇ 27: ಯುವವಾಹಿನಿ (ರಿ.) ಶಕ್ತಿನಗರ ಘಟಕದ ವತಿಯಿಂದ ತುಳುನಾಡಿನ ಅಪ್ರತಿಮ ಕ್ರಾಂತಿವೀರ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಮಂಜ ಬೈದ್ಯರ ಸಂಸ್ಮರಣಾ ಕಾರ್ಯಕ್ರಮವನ್ನು ಮೇ 27, 2026 ರಂದು ಕುಂಟಲ್ಪಾಡಿಯ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಯೋಜಿಸಲಾಯಿತು.

ಬ್ರಿಟಿಷರ ದಾಸ್ಯದಿಂದ ಜನರನ್ನು ಮುಕ್ತಗೊಳಿಸುವ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಮಂಜ ಬೈದ್ಯರು, ತಮ್ಮ ಧೈರ್ಯಶಾಲಿ ಹೋರಾಟದ ಪರಿಣಾಮವಾಗಿ 1837 ರ ಮೇ 27 ರಂದು ಮಂಗಳೂರಿನ ಬಿಕರ್ನಕಟ್ಟೆಯಲ್ಲಿ ಬ್ರಿಟಿಷರಿಂದ ಗಲ್ಲಿಗೇರಿಸಲ್ಪಟ್ಟು ವೀರಮರಣವನ್ನಪ್ಪಿದ್ದರು. ಈ ಹಿನ್ನೆಲೆಯಲ್ಲಿ ಅವರ ಬಲಿದಾನದ ಸ್ಮರಣಾರ್ಥವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಂಜ ಬೈದ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಗೌರವ ನಮನ ಅರ್ಪಿಸಲಾಯಿತು. ಮುಖ್ಯ ಉಪನ್ಯಾಸಕರಾಗಿ ಭಾಗವಹಿಸಿದ್ದ ವಕೀಲರಾದ ಶ್ರೇಯಸ್ ಎಸ್. ಕೆ. ಅವರು ಮಾತನಾಡಿ, “ಮಂಜ ಬೈದ್ಯರ ಜೀವನ, ಹೋರಾಟ ಮತ್ತು ದೇಶಭಕ್ತಿ ಇಂದಿನ ಯುವ ಪೀಳಿಗೆಗೆ ಪ್ರೇರಣೆಯಾಗಿದೆ” ಎಂದು ಅವರ ತ್ಯಾಗ ಮತ್ತು ಸಾಹಸವನ್ನು ನೆನಪಿಸಿದರು.
ಘಟಕದ ಅಧ್ಯಕ್ಷರಾದ ತೇಜಸ್ ವಿ. ಪೂಜಾರಿ ಅವರು ಸಭಿಕರನ್ನು ಸ್ವಾಗತಿಸಿದರು. ಈ ಸಂದರ್ಭದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಸುಮಾರು 40ಕ್ಕೂ ಹೆಚ್ಚು ಗಣ್ಯರು ಉಪಸ್ಥಿತರಿದ್ದು ಕ್ರಾಂತಿವೀರನಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಘಟಕದ ಕಾರ್ಯದರ್ಶಿಯಾದ ಪ್ರತಿಭಾ ಶಶಿರಾಜ್ ಅವರು ಧನ್ಯವಾದ ಸಮರ್ಪಿಸಿದರು. ರಾಷ್ಟ್ರಭಕ್ತಿ ಗೀತೆಯಾದ ‘ವಂದೇ ಮಾತರಂ’ ಗಾಯನದೊಂದಿಗೆ ಕಾರ್ಯಕ್ರಮವು ಸಮಾಪ್ತಿಗೊಂಡಿತು.


