ಮೂಡುಬಿದಿರೆ, ಮೇ 28: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲ ಹಾಗೂ ನೋಮಿ ನೆಟ್ವರ್ಕ್ ಪ್ರಾಯೋಜಕತ್ವದಲ್ಲಿ ವಿಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಸಹಯೋಗದೊಂದಿಗೆ ಆಯೋಜಿಸಲಾದ 15 ದಿನಗಳ ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿಯ ಸಮಾರೋಪ ಸಮಾರಂಭ ಹಾಗೂ ಪ್ರಮಾಣಪತ್ರ ವಿತರಣಾ ಕಾರ್ಯಕ್ರಮವು 28-05-2026 ರಂದು ವಿಚೀಸ್ ಕೌಶಲ್ಯ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಭಾರತೀಯ ವಿಕಾಸ ಟ್ರಸ್ಟ್ ಮಣಿಪಾಲದ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಅವರು, ಮಹಿಳೆಯರು ಕೌಶಲ್ಯಾಧಾರಿತ ತರಬೇತಿಗಳನ್ನು ಪಡೆದು ಸ್ವಾವಲಂಬಿ ಜೀವನದತ್ತ ಹೆಜ್ಜೆ ಇಡಬೇಕಾದ ಅಗತ್ಯವನ್ನು ಒತ್ತಿಹೇಳಿದರು. ಫ್ಯಾಷನ್ ಡಿಸೈನ್ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗ ಮತ್ತು ಸ್ವಉದ್ಯೋಗ ಅವಕಾಶಗಳಿದ್ದು, ಮನೆಯಲ್ಲಿಯೇ ಉದ್ಯಮ ಆರಂಭಿಸಿ ಉತ್ತಮ ಆದಾಯ ಗಳಿಸಲು ಸಾಧ್ಯವಿದೆ ಎಂದು ತಿಳಿಸಿದರು.
ಯುವವಾಹಿನಿ (ರಿ.) ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಮಾರೂರು ಅವರು ಮಾತನಾಡಿ, ತರಬೇತಿಯಲ್ಲಿ ಭಾಗವಹಿಸಿದ ಮಹಿಳೆಯರ ಆಸಕ್ತಿ, ಶಿಸ್ತು ಹಾಗೂ ಸೃಜನಶೀಲತೆಯನ್ನು ಶ್ಲಾಘಿಸಿದರು. ಮಹಿಳೆಯರ ಆರ್ಥಿಕ ಸಬಲೀಕರಣ ಮತ್ತು ಆತ್ಮವಿಶ್ವಾಸ ವೃದ್ಧಿಗೆ ಪೂರಕವಾಗುವ ಇಂತಹ ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಮುಂದಿನ ದಿನಗಳಲ್ಲಿಯೂ ಆಯೋಜಿಸಲಾಗುವುದು ಎಂದು ಹೇಳಿದರು. ವಿಚೀಸ್ ಕೌಶಲ್ಯ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮಿ ಕುಂದರ್ ಅವರು ತರಬೇತಿಯ ಬಳಿಕ ಲಭ್ಯವಿರುವ ಉದ್ಯೋಗ ಮತ್ತು ಸ್ವಉದ್ಯೋಗ ಅವಕಾಶಗಳ ಕುರಿತು ಮಾಹಿತಿ ನೀಡಿದರು. ತರಬೇತಿಯ ಶಿಕ್ಷಕಿಯಾದ ಅನಿತಾ ಅವರು 15 ದಿನಗಳ ತರಬೇತಿಯ ಅನುಭವ ಹಂಚಿಕೊಂಡು, ಭಾಗವಹಿಸಿದ ಮಹಿಳೆಯರ ಕಲಿಕೆಯ ಉತ್ಸಾಹ ಮತ್ತು ಬದ್ಧತೆಯನ್ನು ಮೆಚ್ಚಿದರು. ಕಾರ್ಯಕ್ರಮದಲ್ಲಿ ತರಬೇತಿ ಪಡೆದ ಮಹಿಳೆಯರು ತಮ್ಮ ಅನುಭವ ಮತ್ತು ಅಭಿಪ್ರಾಯಗಳನ್ನು ಹಂಚಿಕೊಂಡರು. ಒಟ್ಟು 27 ಮಹಿಳೆಯರು ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಪ್ರಮಾಣಪತ್ರಗಳನ್ನು ಸ್ವೀಕರಿಸಿದರು. ಪವಿತ್ರ ಸರಸ್ವತಿ ಅವರು ಪ್ರಾರ್ಥನೆ ನೆರವೇರಿಸಿದರು. ಜೆನಿಫರ್ ಕಾರ್ಯಕ್ರಮ ನಿರೂಪಿಸಿದರು. ಪ್ರಮೀಳಾ ವಂದನಾರ್ಪಣೆಗೈದರು.
ಉಚಿತ ಫ್ಯಾಷನ್ ಡಿಸೈನ್ ಕೌಶಲ್ಯ ತರಬೇತಿ ಸಮಾರೋಪ ಕಾರ್ಯಕ್ರಮದಲ್ಲಿ ತರಬೇತಿ ಪೂರ್ಣಗೊಳಿಸಿದ ಮಹಿಳೆಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಈ ಸಂದರ್ಭದಲ್ಲಿ ಜೀವನ್ ಕೊಲ್ಯ, ಗಿರೀಶ್ ಕೋಟ್ಯಾನ್ ಮಾರೂರು, ಶುಭಲಕ್ಷ್ಮಿ ಕುಂದರ್, ಅನಿತಾ ಹಾಗೂ ಇತರರು ಉಪಸ್ಥಿತರಿದ್ದರು


