
ಕೂಳೂರು : ಸಮಾಜಮುಖಿ ಮತ್ತು ಜನಪರ ಕಾರ್ಯಕ್ರಮಗಳ ಮೂಲಕ ಸದಾ ಮುಂಚೂಣಿಯಲ್ಲಿರುವ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಮತ್ತೊಂದು ಶ್ಲಾಘನೀಯ ಸೇವಾ ಕಾರ್ಯ ನಡೆದಿದೆ. ಘಟಕದ 26ನೇ ಸೇವಾನಿಧಿ ಯೋಜನೆಯಾದ ಸಹಾಯಹಸ್ತ ಕಾರ್ಯಕ್ರಮದಡಿ, ಇತ್ತೀಚೆಗೆ ಸಂಭವಿಸಿದ ಭೀಕರ ವಾಹನ ಅಪಘಾತದಿಂದ ತೀವ್ರ ತೊಂದರೆಗೆ ಒಳಗಾಗಿದ್ದ ಕಾರ್ಕಳದ ಈದು ನಿವಾಸಿ ದಯಾನಂದ ಪೂಜಾರಿ (26) ಅವರ ಕುಟುಂಬಕ್ಕೆ ತುರ್ತು ಚಿಕಿತ್ಸಾ ವೆಚ್ಚಕ್ಕಾಗಿ ರೂ.16,000/-ಧನಸಹಾಯವನ್ನು ನೀಡಲಾಯಿತು.
ದಿನಾಂಕ 27-05-2026ರಂದು ನಡೆದ ಘಟಕದ ಸಾಪ್ತಾಹಿಕ ಸಭೆಯಲ್ಲಿ, ಘಟಕದ ಅಧ್ಯಕ್ಷೆ ಗೀತಾ ವಸಂತ್ ಅವರು ಅಪಘಾತ ಸಂತ್ರಸ್ತ ದಯಾನಂದ ಪೂಜಾರಿ ಅವರ ಸಹೋದರ ಅಶೋಕ್ ಪೂಜಾರಿ ಅವರಿಗೆ ಈ ಆರ್ಥಿಕ ನೆರವಿನ ಮೊತ್ತವನ್ನು ಹಸ್ತಾಂತರಿಸಿ, ಸಂತ್ರಸ್ತ ಯುವಕ ಶೀಘ್ರವಾಗಿ ಗುಣಮುಖನಾಗಲಿ ಎಂದು ಹಾರೈಸಿದರು.

ಈ ಮಾನವೀಯ ಕಾರ್ಯದ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ.ಎಸ್., ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಮಾಜಸೇವಾ ನಿರ್ದೇಶಕಿ ಅನಿತಾ ತುಕಾರಾಂ ಪೂಜಾರಿ, ಘಟಕದ ಕಾರ್ಯದರ್ಶಿಗಳು ಸೇರಿದಂತೆ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದು ಸಹಕರಿಸಿದರು.


