ಮಾಣಿ : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಮೇ 24, 2026ರಂದು ಆಯೋಜಿಸಲಾದ “ಯುವ ಸ್ನೇಹ ಸಂಭ್ರಮ – 2026” ಎಂಬ ಒಂದು ದಿನದ ಸ್ನೇಹ ಪ್ರವಾಸವು ಅತ್ಯಂತ ಸಂತೋಷ, ಸೌಹಾರ್ದತೆ ಹಾಗೂ ಸಂಭ್ರಮದ ವಾತಾವರಣದಲ್ಲಿ ಯಶಸ್ವಿಯಾಗಿ ನೆರವೇರಿತು.

ಪ್ರವಾಸ ಆರಂಭಕ್ಕೂ ಮುನ್ನ ಯುವವಾಹಿನಿ ಮಾಣಿ ಘಟಕದ ಅಧ್ಯಕ್ಷರಾದ ಗಣೇಶ್ ಕೊಡಾಜೆ ಅವರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಬೆಳಿಗ್ಗೆ 6.00 ಗಂಟೆಗೆ ಸದಸ್ಯರು ಪ್ರವಾಸಕ್ಕೆ ಚಾಲನೆ ನೀಡಿದರು. ಮೊದಲಿಗೆ ಬಪ್ಪನಾಡು ದುರ್ಗಾಪರಮೇಶ್ವರಿ ಕ್ಷೇತ್ರ ಹಾಗೂ ಬಳಿಕ ಕಾಪು ಮಾರಿಕಾಂಬ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಂತರ ಎಲ್ಲರೂ ಬ್ರಹ್ಮಾವರದ ಸುಂದರ ಪ್ರಕೃತಿ ತಾಣವಾದ ಹಿಡನ್ ಹೆವನ್ ತಲುಪಿ ದಿನವಿಡೀ ವಿವಿಧ ಮನರಂಜನಾ ಚಟುವಟಿಕೆಗಳಲ್ಲಿ ಭಾಗವಹಿಸಿ ಸಂತಸಪಟ್ಟರು. ಈ ಸ್ನೇಹ ಪ್ರವಾಸದಲ್ಲಿ ಒಟ್ಟು 66 ಸದಸ್ಯರು ಭಾಗವಹಿಸಿ ಸಂಭ್ರಮಿಸಿದರು. ವಿವಿಧ ರೀತಿಯ ಮನರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ಸದಸ್ಯರೆಲ್ಲರೂ ಉತ್ಸಾಹದಿಂದ ಪಾಲ್ಗೊಂಡರು. ಆಟೋಟ ಕಾರ್ಯಕ್ರಮಗಳನ್ನು ಶುಭಾ ಪೆರ್ನೆ, ರಾಜೇಶ್ ಬಲ್ಯ ಹಾಗೂ ಅಮಿತಾ ಪೆರ್ನೆ ಅವರು ಯಶಸ್ವಿಯಾಗಿ ನಡೆಸಿಕೊಟ್ಟರು.
ಪ್ರವಾಸದ ವಿಶೇಷ ಆಕರ್ಷಣೆಯಾಗಿ ರೀಲ್ಸ್ ಸ್ಪರ್ಧೆ ಕೂಡ ಆಯೋಜಿಸಲಾಗಿತ್ತು. ಹೊಸ ಹೊಸ ದೃಶ್ಯಗಳು ಹಾಗೂ ಸೃಜನಾತ್ಮಕ ವಿಡಿಯೋಗಳನ್ನು ತೆಗೆಯಲು ಎಲ್ಲರೂ ಕುತೂಹಲದಿಂದ ಭಾಗವಹಿಸಿ, ಸ್ಪರ್ಧೆಯನ್ನು ತುಂಬಾ ಉತ್ಸಾಹದಿಂದ ಆನಂದಿಸಿದರು.
ಈ ಸಂದರ್ಭದಲ್ಲಿ ಯುವವಾಹಿನಿ ಮಾಣಿ ಘಟಕದ ಉಪಾಧ್ಯಕ್ಷರಾದ ಸುಜಿತ್ ಮಾಣಿ ಅವರ ಹುಟ್ಟುಹಬ್ಬವನ್ನೂ ಆಚರಿಸಲಾಯಿತು. ಕೇಕ್ ಕತ್ತರಿಸಿ ಎಲ್ಲ ಸದಸ್ಯರು ಶುಭ ಹಾರೈಸಿದ ಕ್ಷಣ ಪ್ರವಾಸದ ಮತ್ತೊಂದು ವಿಶೇಷ ನೆನಪಾಗಿ ಉಳಿಯಿತು. ಘಟಕದ ಅಧ್ಯಕ್ಷರಾದ ಗಣೇಶ್ ಕೊಡಾಜೆ ಅವರ ಮಾರ್ಗದರ್ಶನದಲ್ಲಿ ಹಾಗೂ ಸಂಚಾಲಕರಾದ ಪೃಥ್ವಿಕ್ ಮಾಣಿ ಅವರ ನೇತೃತ್ವದಲ್ಲಿ ಈ ಸ್ನೇಹ ಪ್ರವಾಸವು ಯಶಸ್ವಿಯಾಗಿ ನೆರವೇರಿತು. ಸಂಜೆ 6.00 ಗಂಟೆಗೆ ಎಲ್ಲರೂ ಸಂತಸದ ನೆನಪುಗಳೊಂದಿಗೆ ಮರಳಿದರು.
ಕೊನೆಯಲ್ಲಿ ಪ್ರವಾಸದಲ್ಲಿ ಭಾಗವಹಿಸಿದ ಸದಸ್ಯರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಮಾಜಿ ಅಧ್ಯಕ್ಷರು, ಹೊಸ ಸದಸ್ಯರು ಹಾಗೂ ಸದಸ್ಯರೆಲ್ಲರೂ “ಯುವ ಸ್ನೇಹ ಸಂಭ್ರಮ – 2026” ಕುರಿತು ತಮ್ಮ ಸಂತೋಷವನ್ನು ವ್ಯಕ್ತಪಡಿಸಿ, ಇಂತಹ ಸ್ನೇಹ ಪ್ರವಾಸಗಳು ಪರಸ್ಪರ ಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಅಂತಿಮವಾಗಿ ಘಟಕದ ಕಾರ್ಯದರ್ಶಿಯಾದ ವಿಶ್ವನಾಥ ಪೂಜಾರಿ ಅವರು ಎಲ್ಲ ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರವಾಸದ ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ವಂದನಾ ಸಮರ್ಪಿಸಿದರು. ಸ್ನೇಹ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಿದ “ಯುವ ಸ್ನೇಹ ಸಂಭ್ರಮ – 2026” ಎಲ್ಲರ ಮನದಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.


