ವಿಟ್ಲ : ಕುಂಡಡ್ಕ ಬಿಲ್ಲವ ಸಭಾ ಭವನದಲ್ಲಿ ದಿನಾಂಕ 24/05/2026 ರಂದು ಬಿಲ್ಲವ ಸಂಘ (ರಿ.) ಕುಂಡಡ್ಕ ಬೆಳ್ಳಿ ಹಬ್ಬ ಸಮಿತಿ ಹಾಗೂ ಯುವವಾಹಿನಿ (ರಿ.) ವಿಟ್ಲ ಘಟಕದ ಜಂಟಿ ಆಶ್ರಯದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ ವಿತರಣಾ ಕಾರ್ಯಕ್ರಮವು ಜರುಗಿತು.

ಸಮಾಜಮುಖಿ ಕಾರ್ಯಗಳ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ಉದಾತ್ತ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಅವರಿಗೆ ಅಗತ್ಯವಿರುವ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.
ಈ ಅರ್ಥಪೂರ್ಣ ಕಾರ್ಯಕ್ರಮವು ನೆರೆದಿದ್ದ ವಿದ್ಯಾರ್ಥಿಗಳು, ಪೋಷಕರು ಹಾಗೂ ಸಾರ್ವಜನಿಕರ ಶ್ಲಾಘನೆ ಮತ್ತು ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿನೋದ್ ಕುಂಡಡ್ಕ ಅವರು ಮಾತನಾಡಿ, “ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸಂಘ-ಸಂಸ್ಥೆಗಳು ನೀಡುವ ಇಂತಹ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಮಾಜದ ಉತ್ತಮ ಪ್ರಜೆಗಳಾಗಬೇಕು” ಎಂದು ಕರೆ ನೀಡಿದರು.
ಪ್ರಸಾದಿನಿ ಅವರು ಸಮಾರಂಭವನ್ನು ಅಚ್ಚುಕಟ್ಟಾಗಿ ನಡೆಿಸಿಕೊಟ್ಟರು. ಯುವವಾಹಿನಿ ವಿಟ್ಲ ಘಟಕದ ಅಧ್ಯಕ್ಷರಾದ ಕೆ.ಟಿ. ಆನಂದ್ ಪೂಜಾರಿ ಅವರು ಆಗಮಿಸಿದ ಸರ್ವರನ್ನೂ ವಂದಿಸಿ, ಧನ್ಯವಾದ ಸಮರ್ಪಿಸಿದರು. ವೇದಿಕೆಯಲ್ಲಿ ಸಂಘಟನೆಯ ಪ್ರಮುಖರು, ಪೋಷಕರು ಹಾಗೂ ನೂರಾರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


