ಕೆಂಜಾರು : ಯುವವಾಹಿನಿ (ರಿ.) ಕೆಂಜಾರು – ಕರಂಬಾರು ಘಟಕದ 2026-27ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ಸಮಾರಂಭವು ಮೇ 17ರಂದು ಕೆಂಜಾರು ಶ್ರೀದೇವಿ ಭಜನಾ ಮಂದಿರದ ಸಭಾಂಗಣದಲ್ಲಿ ಜರುಗಿತು.
ಕೆಂಜಾರು ಶ್ರೀ ರಾಮಾಂಜನೇಯ ದೇವಸ್ಥಾನದ ಅಧ್ಯಕ್ಷರಾದ ಮಹಾಬಲ ಪೂಜಾರಿ ಅವರು ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ, ನೂತನ ತಂಡದ ಸಮಾಜಮುಖಿ ಚಿಂತನೆಗಳಿಗೆ ಶುಭ ಹಾರೈಸಿದರು. ಘಟಕದ ಅಧ್ಯಕ್ಷರಾದ ಸಂದೀಪ್ ಕೋರೆಮನೆ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು.

ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ನೂತನ ಸಾಲಿನ ಅಧ್ಯಕ್ಷರಾಗಿ ಆಯ್ಕೆಯಾದ ಪ್ರಿತೇಶ್ ಕುಮಾರ್ ಅರ್ಬಿ ಕಾರ್ಯದರ್ಶಿ ರಾಜೇಶ್ ಎಸ್. ಪೂಜಾರಿ ಕೆಂಜಾರು ಹಾಗೂ ನೂತನ ಕಾರ್ಯಕಾರಿ ಸಮಿತಿಗೆ, ಪ್ರತಿಜ್ಞಾವಿಧಿ ಬೋಧಿಸಿದರು. ಅಧಿಕಾರ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷರಾದ ಪ್ರಿತೇಶ್ ಅರ್ಬಿ ಅವರು, ಸರ್ವರ ಸಹಕಾರದೊಂದಿಗೆ ಕೆಂಜಾರು-ಕರಂಬಾರು ಘಟಕವನ್ನು ಇನ್ನಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಸಾಧಕರಿಗೆ ಸನ್ಮಾನ ಹಾಗೂ ಧನಸಹಾಯ ಹಸ್ತಾಂತರ
ಇದೇ ಸಂದರ್ಭದಲ್ಲಿ ಸಮಾಜದ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಅಂಗನವಾಡಿ ನಿವೃತ್ತ ಕಾರ್ಯಕರ್ತೆ ನಳಿನಿ ಉಮೇಶ್ ಹಾಗೂ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರನ್ನು ಘಟಕದ ವತಿಯಿಂದ ಅತ್ಯಂತ ಗೌರವಪೂರ್ವಕವಾಗಿ ಘಟಕದ ವತಿಯಿಂದ ಅಭಿನಂದಿಸಲಾಯಿತು.
ಘಟಕದ ಕಾರ್ಯಕ್ರಮಗಳಿಗೆ ನಿರಂತರ ಪ್ರೋತ್ಸಾಹ ನೀಡುತ್ತಿರುವ ಶ್ರೀದೇವಿ ಭಜನಾ ಮಂದಿರದ ಕಟ್ಟಡದ ಮೇಲ್ಚಾವಣಿ ಕಾಮಗಾರಿಗಾಗಿ ಘಟಕದ ವತಿಯಿಂದ ನೀಡಲಾದ ಧನಸಹಾಯದ ಮೊತ್ತವನ್ನು ಭಜನಾ ಮಂದಿರದ ಅಧ್ಯಕ್ಷರಿಗೆ ಇದೇ ವೇದಿಕೆಯಲ್ಲಿ ಹಸ್ತಾಂತರಿಸಲಾಯಿತು. ಮುಖ್ಯ ಅತಿಥಿಯಾಗಿದ್ದ ವಿಜಯಕುಮಾರ್ ಕೆಂಜಾರು ಕಾನ ಅವರು ಮಾತನಾಡಿ, “ಕೆಂಜಾರು ಕರಂಬಾರು ಘಟಕವು ಕಳೆದ ಎಂಟು ವರ್ಷಗಳಿಂದ ಜನಪರ ಹಾಗೂ ಸಮಾಜಮುಖಿ ಕಾರ್ಯಗಳ ಮೂಲಕ ಸಾರ್ವಜನಿಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲೂ ಈ ಯುವಶಕ್ತಿಯಿಂದ ಇನ್ನಷ್ಟು ಸತ್ಕಾರ್ಯಗಳು ಮೂಡಿಬರಲಿ” ಎಂದು ಆಶಿಸಿದರು. ಪ್ರತಿಜ್ಞಾವಿಧಿ ಬೋಧಿಸಿ ಮಾತನಾಡಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು, ನೂತನ ತಂಡಕ್ಕೆ ಶುಭ ಹಾರೈಸುತ್ತಾ, ಕೇಂದ್ರ ಸಮಿತಿಯೊಂದಿಗೆ ಸದಾ ನಿರಂತರ ಸಂಪರ್ಕದಲ್ಲಿರಲು ಸೂಚಿಸಿದರು. ಘಟಕದ ಪ್ರತಿಯೊಂದು ಸತ್ಕಾರ್ಯಕ್ಕೂ ಕೇಂದ್ರ ಸಮಿತಿಯ ಪೂರ್ಣ ಬೆಂಬಲದೊಂದಿಗೆ ಸದಾ ಇರಲಿದೆ ಎಂದು ಅವರು ಭರವಸೆ ನೀಡಿದರು.
ವೇದಿಕೆಯಲ್ಲಿ ಶ್ರೀದೇವಿ ಭಜನಾ ಮಂದಿರದ ಅಧ್ಯಕ್ಷರಾದ ಮಿತ್ರದಾಸ್ ಅಮೀನ್ ಹಾಗೂ ಕೇಂದ್ರ ಸಂಘಟನಾ ನಿರ್ದೇಶಕರಾದ ಅಕ್ಷತ್ ಕುಮಾರ್ ಕುಪ್ಪೆಪದವು ಉಪಸ್ಥಿತರಿದ್ದು ನೂತನ ತಂಡಕ್ಕೆ ಪ್ರೋತ್ಸಾಹ ನೀಡಿದರು.
ಘಟಕದ ಅಧ್ಯಕ್ಷರಾದ ಸಂದೀಪ್ ಕೋರೆಮನೆ ಸ್ವಾಗತಿಸಿದರು. ಮಾಜಿ ಅಧ್ಯಕ್ಷರಾದ ಭರತ್ ಪೂಜಾರಿ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸಂಘಟನೆಯ ಆಶಯಗಳನ್ನು ಸಭೆಯ ಮುಂದಿಟ್ಟರು. ಕಾರ್ಯದರ್ಶಿ ನವ್ಯ ಜಯಂತ್ ಅವರು ಕಳೆದ ಸಾಲಿನಲ್ಲಿ ಘಟಕವು ಹಮ್ಮಿಕೊಂಡಿದ್ದ ವೈವಿಧ್ಯಮಯ ಹಾಗೂ ಯಶಸ್ವಿ ಕಾರ್ಯಕ್ರಮಗಳ ವರದಿಯನ್ನು ವಾಚಿಸಿದರು , ಕಾರ್ಯಕ್ರಮದ ಕೊನೆಯಲ್ಲಿ ನೂತನ ಕಾರ್ಯದರ್ಶಿ ರಾಜೇಶ್ ಎಸ್. ಪೂಜಾರಿ ಅವರು ಉಪಸ್ಥಿತರಿದ್ದ ಎಲ್ಲರಿಗೂ ಕೃತಜ್ಞತಾಪೂರ್ವಕ ಧನ್ಯವಾದ ಸಮರ್ಪಣೆ ಮಾಡಿದರು. ಘಟಕದ ಮಾಜಿ ಅಧ್ಯಕ್ಷರಾದ ಜಿತೇಶ್ ಸಾಲಿಯಾನ್ ಕಾರ್ಯಕ್ರಮವನ್ನು ನಿರೂಪಿಸಿದರು.


