ಮೂಡಬಿದಿರೆ : ಯುವವಾಹಿನಿ (ರಿ.) ಮೂಡಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ (BVT) ಮಣಿಪಾಲ ಹಾಗೂ ನೋಮಿ ಯೋಜನೆ ಪ್ರಾಯೋಜಕತ್ವದಲ್ಲಿ, ವಿಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಇವರ ಸಹಕಾರದೊಂದಿಗೆ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾದ 15 ದಿನಗಳ ‘ಉಚಿತ ಫ್ಯಾಷನ್ ಡಿಸೈನ್ ತರಬೇತಿ’ ಕಾರ್ಯಕ್ರಮವು ದಿನಾಂಕ 12.05.2026 ರ ಮಂಗಳವಾರದಂದು ಇಲ್ಲಿನ ಸಮಾಜ ಮಂದಿರದಲ್ಲಿ ದೀಪ ಪ್ರಜ್ವಲನೆಗಳೊಂದಿಗೆ ಸಡಗರದಿಂದ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ (ರಿ.) ಮೂಡಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಅವರು, “ಇಂದಿನ ದಿನಗಳಲ್ಲಿ ಮಹಿಳೆಯರು ಆಧುನಿಕ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅತ್ಯಂತ ಅಗತ್ಯವಾಗಿದೆ. ಮಹಿಳೆಯರು ಇಂತಹ ಉಚಿತ ತರಬೇತಿಗಳ ಸದುಪಯೋಗ ಪಡೆದುಕೊಂಡು, ಹೆಚ್ಚಿನ ಕೌಶಲ್ಯ ಕಲಿತು ಸ್ವ ಉದ್ಯೋಗದ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು” ಎಂದು ಕರೆ ನೀಡಿದರು.
ತರಬೇತಿ ಮತ್ತು ಆರ್ಥಿಕ ಸೌಲಭ್ಯಗಳ ಮಾಹಿತಿ: ತರಬೇತಿಯ ಉದ್ದೇಶ:ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಕೊಲ್ಯ ಅವರು ತರಬೇತಿಯ ಮುಖ್ಯ ಉದ್ದೇಶಗಳು, ಶಿಸ್ತು ಹಾಗೂ ನಿಯಮಾವಳಿಗಳ ಬಗ್ಗೆ ಶಿಬಿರಾರ್ಥಿಗಳಿಗೆ ಸವಿಸ್ತಾರವಾಗಿ ವಿವರಿಸಿದರು.
ಬ್ಯಾಂಕಿಂಗ್ ಮತ್ತು ಸಾಲ ಸೌಲಭ್ಯ: ಕೆನರಾ ಬ್ಯಾಂಕ್ ಅಮೂಲ್ಯ ಆರ್ಥಿಕ ಸಾಕ್ಷರತಾ ಯೋಜನೆಯ ಸಮಾಲೋಚಕರಾದ ಲತೀಶ್ ಅವರು ಮಹಿಳೆಯರು ಸ್ವ ಉದ್ಯೋಗವನ್ನು ಪ್ರಾರಂಭಿಸಲು ಬ್ಯಾಂಕ್‌ಗಳಲ್ಲಿ ದೊರೆಯುವ ವಿವಿಧ ಸಾಲ ಸೌಲಭ್ಯಗಳು, ಸಬ್ಸಿಡಿಗಳು ಹಾಗೂ ಸರ್ಕಾರದ ವಿಮಾ ಯೋಜನೆಗಳ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಯುವವಾಹಿನಿ ಮೂಡಬಿದಿರೆ ಘಟಕದ ಕೋಶಾಧಿಕಾರಿ ಜಯಶೀಲಾ ಎಸ್. ಪೂಜಾರಿ, ಸಂಘಟನಾ ಕಾರ್ಯದರ್ಶಿಗಳಾದ ಅಶೋಕ್ ಕೇಮಾರ್, ಪ್ರಸಾದ್ ಸುವರ್ಣ ಪುತ್ತಿಗೆ ಮತ್ತು ಮುಖ್ಯ ತರಬೇತುದಾರರಾದ ಅನಿತ ಆನಂದ್ ಒಂಟಿಕಟ್ಟೆ ಉಪಸ್ಥಿತರಿದ್ದು ತರಬೇತಿಗೆ ಶುಭ ಹಾರೈಸಿದರು. ಸ್ವಾವಲಂಬಿ ಬದುಕಿನ ಕನಸು ಹೊತ್ತ ಒಟ್ಟು 27 ಆಸಕ್ತ ಮಹಿಳೆಯರು ಈ 15 ದಿನಗಳ ಉಚಿತ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಕಾರ್ಯಕ್ರಮದ ಆರಂಭದಲ್ಲಿ ವೀಚೀಶ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮಿ ಅವರು ಎಲ್ಲರನ್ನೂ ಸ್ವಾಗತಿಸಿದರು. ಪವಿತ್ರ ಸರಸ್ವತಿ ಅವರು ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರೂಪಿಸಿದರು. ಶಿಸ್ತುಬದ್ಧ ಸೇವೆ ಹಾಗೂ ವ್ಯವಸ್ಥೆಗಳ ನಿರ್ವಹಣೆಗೆ ಕೈಜೋಡಿಸಿ ಶ್ರೀ ದೇವರ ಕೃಪೆಗೆ ಪಾತ್ರರಾದರು.


