ಮೂಡುಬಿದಿರೆ : ಯುವವಾಹಿನಿ (ರಿ.) ಮೂಡುಬಿದಿರೆ ಘಟಕ, ಭಾರತೀಯ ವಿಕಾಸ ಟ್ರಸ್ಟ್ (ಬಿ.ವಿ.ಟಿ.) ಮಣಿಪಾಲ (ನೋಮಿ ಯೋಜನೆ ಪ್ರಾಯೋಜಕತ್ವದಲ್ಲಿ) ಹಾಗೂ ವಿಚೀಸ್ ಕೌಶಲ್ಯ ಕೇಂದ್ರ ಮೂಡುಬಿದಿರೆ ಇವುಗಳ ಜಂಟಿ ಆಶ್ರಯದಲ್ಲಿ ಸೌರಶಕ್ತಿ ಯೋಜನೆ ಹಾಗೂ ಬ್ಯಾಂಕ್ ಸಾಲ ಸೌಲಭ್ಯಗಳ ಕುರಿತಾದ ಮಾಹಿತಿ ಕಾರ್ಯಕ್ರಮವು ಇಲ್ಲಿನ ಸಮಾಜ ಮಂದಿರದಲ್ಲಿ ಇತ್ತೀಚೆಗೆ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ. ಕೆ. ಅವರು, “ಪ್ರಸ್ತುತ ದಿನಗಳಲ್ಲಿ ಸೌರಶಕ್ತಿ ಆಧಾರಿತ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯವಾಗಿದೆ. ನಾವೆಲ್ಲರೂ ಸೌರಶಕ್ತಿಯ ಮಹತ್ವವನ್ನು ಅರಿತು, ಅದನ್ನು ಅಳವಡಿಸಿಕೊಳ್ಳುವುದರೊಂದಿಗೆ ಸರ್ಕಾರದ ವಿವಿಧ ಜನಪರ ಯೋಜನೆಗಳ ಮಾಹಿತಿಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ಜವಾಬ್ದಾರಿ ವಹಿಸಬೇಕು” ಎಂದು ಕರೆ ನೀಡಿದರು.

ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ದೆಹಲಿಯ ಉದ್ಯಮಿ ಪ್ರಕಾಶ್ ಶೆಟ್ಟಿ ಅವರು ಮಾತನಾಡಿ, “ಸೌರಶಕ್ತಿ ಆಧಾರಿತ ಜೀವನೋಪಾಯ ಕೌಶಲ್ಯಗಳು ಇಂದಿನ ಯುವ ಪೀಳಿಗೆಗೆ ಅನಿವಾರ್ಯವಾಗಿದ್ದು, ಇದರ ಸಮರ್ಪಕ ಮಾಹಿತಿ ಪಡೆದು ಪ್ರತಿಯೊಬ್ಬರೂ ಸ್ವಾವಲಂಬಿ ಜೀವನದೊಂದಿಗೆ ಸ್ವ-ಉದ್ಯೋಗ ಕೈಗೊಳ್ಳಲು ಮುಂದಾಗಬೇಕು” ಎಂದು ಆಶಯ ವ್ಯಕ್ತಪಡಿಸಿದರು.
ಭಾರತೀಯ ವಿಕಾಸ ಟ್ರಸ್ಟ್‌ನ ಕಾರ್ಯಕ್ರಮ ವ್ಯವಸ್ಥಾಪಕರಾದ ಜೀವನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಾರ್ಯಕ್ರಮದ ಆಯೋಜನೆಯ ಅಗತ್ಯತೆ ಹಾಗೂ ಸೌರಶಕ್ತಿ ಬಳಕೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷರಾದ ಗಿರೀಶ್ ಕೋಟ್ಯಾನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಘಟಕದ ಮಾಜಿ ಅಧ್ಯಕ್ಷರಾದ ಶಂಕರ್ ಕೋಟ್ಯಾನ್, ಸಂಪನ್ಮೂಲ ವ್ಯಕ್ತಿಗಳಾದ ರವೀನಾ ಬಂಗೇರ ಹಾಗೂ ಲತೇಶ್ ಬಿ. ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮೂಡುಬಿದಿರೆ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಮುರಳೀಧರ ಕೋಟ್ಯಾನ್, ಯುವವಾಹಿನಿ ಬಜಪೆ ಘಟಕದ ಮಾಜಿ ಅಧ್ಯಕ್ಷರಾದ ರೇಣುಕಾ ಶೇಖರ್, ಕಾರ್ಯದರ್ಶಿ ಶರ್ಮಿಳಾ ಚಂದ್ರಶೇಖರ್, ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ‘ಸೂರ್ಯ ಘರ್’ ಯೋಜನೆ, ಸೌರಶಕ್ತಿ ಜೀವನೋಪಾಯ ಕೌಶಲ್ಯಗಳು ಹಾಗೂ ಈ ಯೋಜನೆಗಳಿಗೆ ಬ್ಯಾಂಕುಗಳಿಂದ ದೊರೆಯುವ ಸಾಲ ಸೌಲಭ್ಯಗಳ ಕುರಿತು ಸಾರ್ವಜನಿಕರಿಗೆ ವಿಸ್ತೃತ ಮಾಹಿತಿ ನೀಡಲಾಯಿತು. ಮೂಡುಬಿದಿರೆ ಸುತ್ತಮುತ್ತಲಿನ ಸುಮಾರು 50ಕ್ಕೂ ಹೆಚ್ಚು ಆಸಕ್ತ ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು. ವೀಚೀಸ್ ಕೌಶಲ್ಯಪರ ತರಬೇತಿ ಕೇಂದ್ರದ ನಿರ್ದೇಶಕಿ ಶುಭಲಕ್ಷ್ಮಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.


