ಯುವವಾಹಿನಿ ಉಡುಪಿ ಘಟಕದ ವತಿಯಿಂದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಮೇ 17/5/2026ರ ಭಾನುವಾರ ನಡೆಯಿತು.

ಬದುಕಿನ ಅನುಭವ ಸಾಧನೆಗೆ ಪ್ರೇರಕ: ಡಾ| ಅಭಯ ಕುಮಾರ್ : ಬದುಕಿನ ಅನುಭವ ಮನುಷ್ಯನ ಸಾಧನೆಗೆ ಪ್ರೇರಕ. ಶಿಕ್ಷಣ ಮತ್ತು ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಳ್ಳುವುದರಿಂದ ವೃದ್ಧಿಯಾಗುತ್ತದೆ ವ್ಯಕ್ತಿತ್ವ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ, ಜಾನಪದ ಸಂಶೋಧಕ ಡಾ ಅಭಯ ಕುಮಾರ್ ಹೇಳಿದರು.
ಯುವವಾಹಿನಿ ಉಡುಪಿ ಘಟಕದ ವತಿಯಿಂದ ರವಿವಾರ ಚಿಟ್ಟಾಡಿ ಲಕ್ಷ್ಮೀ ಟ್ರೇಡ್ ಸೆಂಟರ್ ನಲ್ಲಿನಡೆದ 14ನೇ ವರ್ಷದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾನಪದ ವಿದ್ವಾಂಸ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು.

ಜಾನಪದ ಕಲಾವಿದ ಪ್ರಶಸ್ತಿಯನ್ನು ಸ್ವೀಕರಿಸಿದ ಚಿತ್ರಕಲಾ ಶಿಕ್ಷಕ ಕಲ್ಮಾಡಿ ಶೇಖರ ಪೂಜಾರಿ ಯುವಜನರಿಗೆ ಮಾತನಾಡಿ,
ಕಲೆಯ ಬಗ್ಗೆ ಆಸಕ್ತಿ ಮೂಡಿಸಬೇಕು. ಜಾನಪದ ಆಚರಣೆಗಳಲ್ಲಿ ಯುವ ಜನರು ತೊಡಗಿಸಿಕೊಳ್ಳುವಂತೆ ಮಾಡಬೇಕು ಆಗ ಜಾನಪದ ಕಲೆ ಉಳಿದು ಮುಂದುವರಿಯುವುದು ಎಂದರು.

ಹಿರಿಯ ಸಾಹಿತಿ ಅಂಶುಮಾಲಿ ಮಣಿಪಾಲ ಪ್ರಶಸ್ತಿ ಪ್ರದಾನಗೈದರು. ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಅವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಂಗಳೂರು ರಥಬೀದಿ ಸ.ಪ್ರ.ದ. ಕಾಲೇಜಿನ ಪ್ರಾಧ್ಯಾಪಕ ಡಾ। ದುಗ್ಗಪ್ಪ ಕಜೆಕಾರ್ ಅಭಿನಂದನ ಮಾತುಗಳನ್ನಾಡಿ, ಜಾನಪದಲ್ಲಿ ಸೃಜನಶೀಲಗುಣವಿದೆ. ಕುಟುಂಬ ಪದ್ಧತಿ ಜಾನಪದದಿಂದ ಬೆಳೆದು ಬಂದಿದೆ. ಅದು ಮೌಲ್ಯಗಳನ್ನು ಕಲಿಸುತ್ತದೆ. ಕೃಷಿ ಸಂಸ್ಕೃತಿ ಇಂದು ಮರೆಯಾಗುತ್ತಿದೆ. ತುಳು ಭಾಷೆ, ಶಬ್ದಗಳನ್ನು ಉಳಿಸುವ ನಿಟ್ಟಿನಲ್ಲಿ ಇಂದು ಬಹಳಷ್ಟು ಸಾವಾಲುಗಳನ್ನು ಎದುರಿಸಬೇಕಾಗುತ್ತಿದೆ. ಯಾವುದೇ ಆಚರಣೆಗಳ ಅರ್ಥ ತಿಳಿದು ಅನುಸರಿಬೇಕು. ಜತೆಗೆ ಮಕ್ಕಳಿಗೆ ನಮ್ಮ ಸಂಸ್ಕೃತಿ ತಿಳಿಸುವ ಕೆಲಸವಾಗಬೇಕಿದೆ. ಮಾತೃ ಭಾಷೆಯಲ್ಲಿ ಮಾತನಾಡುವುದರಿಂದ ಆತ್ಮೀಯತೆ ಬೆಳೆಯುವುದು ಎಂದರು.

ವೈಕುಂಠ ಬಾಳಿಗ ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ| ಸುರೇಖಾ ಕೆ. ಅವರನ್ನು ಸಮ್ಮಾನಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಡು ಶುಭ ಹಾರೈಸಿದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷ ವಿನೋದ್ ಮಂಚಿ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದ ಸಂಚಾಲಕ ಭಾಸ್ಕರ ಸುವರ್ಣ ಸ್ವಾಗತಿಸಿದರು. ಪ್ರಶಸ್ತಿ ಆಯ್ಕೆ ಸಮಿತಿ ಅಧ್ಯಕ್ಷ ಮುದ್ದು ಮೂಡುಬೆಳ್ಳೆ ಪ್ರಸ್ತಾವನೆಗೈದರು. ಯುವವಾಹಿನಿ ಉಡುಪಿ ಘಟಕದ ಕಾರ್ಯದರ್ಶಿ ವೀಕ್ಷಿತ್ ವಂದಿಸಿದರು. ತೇಜಸ್ ಬಂಗೇರ ನಿರೂಪಿಸಿದರು. ಮಹೇಶ್ ಕುಮಾರ್ ಮಲ್ಪೆ ಸಚ್ಚೇಂದ್ರ ಅಂಬಾಗಿಲು, ಅಮಿತಾಂಜಲಿ ಕಿರಣ್ ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು.ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಸದಸ್ಯರು ಬನ್ನಂಜೆ ಬಾಬು ಅಮೀನ್ ಅಭಿಮಾನಿ ಗಳು ಉಪಸ್ಥಿತರಿದ್ದರು.


