ಮಂಗಳೂರು : ಯುವವಾಹಿನಿ ಮಂಗಳೂರು ಮಹಿಳಾ ಘಟಕದ ವತಿಯಿಂದ ದಿನಾಂಕ 04-05-2026 ರಿಂದ 07-05-2026 ರವರೆಗೆ ಆಯೋಜಿಸಲಾದ “ಶಿವಗಿರಿ ಕ್ಷೇತ್ರ ದರ್ಶನ ಯಾತ್ರೆ” ಭಕ್ತಿಭಾವದಿಂದ ಯಶಸ್ವಿಯಾಗಿ ನಡೆಯಿತು. ಈ ಯಾತ್ರೆಯಲ್ಲಿ ಒಟ್ಟು 35 ಮಂದಿ ಸದಸ್ಯರು ಭಾಗವಹಿಸಿದ್ದರು.

ದಿನಾಂಕ 04-05-2026 ರಂದು ಸಂಜೆ 5:40ಕ್ಕೆ ಮಂಗಳೂರು ರೈಲ್ವೆ ನಿಲ್ದಾಣದಿಂದ ಭಕ್ತಾದಿಗಳು ರೈಲಿನಲ್ಲಿ ಪ್ರಯಾಣ ಆರಂಭಿಸಿದರು. ಮಹಿಳಾ ಘಟಕದ ಅಧ್ಯಕ್ಷೆ ಕಸ್ತೂರಿ ಮಹೇಶ್, ಕಾರ್ಯದರ್ಶಿ ಸೋನಿಯಾ ರಾಜ್, ಉಪಾಧ್ಯಕ್ಷೆ ದೀಪಿಕಾ ಮನೋಜ್ ಹಾಗೂ ಕೋಶಾಧಿಕಾರಿ ಜಯಲಕ್ಷ್ಮಿ ಉಪಸ್ಥಿತರಿದ್ದರು. ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಹರೀಶ್ ಪೂಜಾರಿ ಅವರ ಮಾರ್ಗದರ್ಶನದಲ್ಲಿ ಯಾತ್ರೆ ನಡೆಯಿತು.
ದಿನಾಂಕ 05-05-2026 ರಂದು ಬೆಳಿಗ್ಗೆ ಶಿವಗಿರಿ ರೈಲ್ವೆ ನಿಲ್ದಾಣ ತಲುಪಿದ ಭಕ್ತಾದಿಗಳು ಅಲ್ಲಿಂದ ಬಸ್ಸಿನ ಮೂಲಕ ಶಿವಗಿರಿ ಕ್ಷೇತ್ರಕ್ಕೆ ತೆರಳಿ, ಸ್ನಾನ ಹಾಗೂ ನಿತ್ಯಕರ್ಮಗಳನ್ನು ಮುಗಿಸಿ ಶ್ರೀ ನಾರಾಯಣ ಗುರುಗಳ ಮಹಾಸಮಾಧಿ ಹಾಗೂ ಶಾರದಾ ಪೀಠ ದರ್ಶನ ಪಡೆದರು. ಬಳಿಕ ಚಹಾ ಹಾಗೂ ಉಪಹಾರ ಸೇವಿಸಿ ಮುಂದಿನ ಪ್ರಯಾಣ ಆರಂಭಿಸಲಾಯಿತು.
ನಂತರ ಭಕ್ತಾದಿಗಳು ಜಟಾಯುಪಾರ ತಲುಪಿ ಅಲ್ಲಿನ ಐತಿಹಾಸಿಕ ತಾಣವನ್ನು ವೀಕ್ಷಿಸಿದರು. ಅಲ್ಲಿಂದ ಚೆಂಬಳಂತಿ ಕ್ಷೇತ್ರಕ್ಕೆ ಭೇಟಿ ನೀಡಿ ದರ್ಶನ ಪಡೆದ ಬಳಿಕ ಸಂಜೆ ಕನ್ಯಾಕುಮಾರಿ ತಲುಪಿದರು. ಕನ್ಯಾಕುಮಾರಿಯಲ್ಲಿ ಬೋಟಿಂಗ್ ಅನುಭವಿಸಿ, ವಿವೇಕಾನಂದ ಸ್ಮಾರಕ ಹಾಗೂ ಭಗವತಿ ದೇವಿ ದೇವಸ್ಥಾನ ದರ್ಶನ ಪಡೆದರು. ಬಳಿಕ ಮರುತ್ವಮಲೈ ಆಶ್ರಮದಲ್ಲಿ ರಾತ್ರಿ ಊಟೋಪಚಾರ ಹಾಗೂ ವಸತಿ ವ್ಯವಸ್ಥೆ ಮಾಡಲಾಗಿತ್ತು.
ದಿನಾಂಕ 06-05-2026 ರಂದು ಬೆಳಿಗ್ಗೆ ಆಶ್ರಮದಲ್ಲಿ ಪೂಜೆ, ಭಜನೆ ಹಾಗೂ ಆರತಿಯಲ್ಲಿ ಭಾಗವಹಿಸಿದ ನಂತರ ಗುರುಗಳು ತಪಸ್ಸು ಮಾಡಿದ ಮರುತ್ವಮಲೈ ಗುಹೆಗೆ ಭಕ್ತಿಭಾವದಿಂದ ತೆರಳಿ ದರ್ಶನ ಪಡೆದರು. ನಂತರ ಅರವಿಪುರ ಕ್ಷೇತ್ರಕ್ಕೆ ತೆರಳಿ ಮಧ್ಯಾಹ್ನದ ಊಟೋಪಚಾರ ಮುಗಿಸಿ, ಕೊಳತ್ತಾಪುರ ಕ್ಷೇತ್ರ ಹಾಗೂ ಅನಂತಪದ್ಮನಾಭ ದೇವಸ್ಥಾನ ದರ್ಶನ ಪಡೆದರು. ಬಳಿಕ ಸಂಜೆ 6:40ಕ್ಕೆ ತಿರುವನಂತಪುರಂ ರೈಲ್ವೆ ನಿಲ್ದಾಣದಿಂದ ರೈಲಿನಲ್ಲಿ ಹಿಂತಿರುಗುವ ಪ್ರಯಾಣ ಆರಂಭಿಸಲಾಯಿತು.
ದಿನಾಂಕ 07-05-2026 ರಂದು ಬೆಳಿಗ್ಗೆ 8:15ಕ್ಕೆ ಎಲ್ಲಾ ಸದಸ್ಯರು ಸುರಕ್ಷಿತವಾಗಿ ಮಂಗಳೂರು ರೈಲ್ವೆ ನಿಲ್ದಾಣ ತಲುಪಿದರು. ಸಂಪೂರ್ಣ ಯಾತ್ರೆಯು ಭಕ್ತಿಭಾವ ಹಾಗೂ ಆಧ್ಯಾತ್ಮಿಕ ಅನುಭವಗಳಿಂದ ಕೂಡಿದ್ದು, ಭಾಗವಹಿಸಿದ ಎಲ್ಲಾ ಸದಸ್ಯರು ಸಂತೋಷ ವ್ಯಕ್ತಪಡಿಸಿದರು. ಯಾತ್ರೆಯ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಮಹಿಳಾ ಘಟಕದ ಅಧ್ಯಕ್ಷರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.


