ಮಂಗಳೂರು : ಯುವವಾಹಿನಿ ಮಂಗಳೂರು ಘಟಕದ ವತಿಯಿಂದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮ 14.04.2026 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ನಡೆಯಿತು ನಡೆಯಿತು. ಈ ಸಂದರ್ಭದಲ್ಲಿ ಬಿ. ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಭಾಷಣಕಾರರಾದ ಸುನಿಲ್ ಕುಮಾರ್ ಬಜಾಲ್ ಅವರು ಮಾತನಾಡಿ, ಅಸ್ಪೃಶ್ಯತೆಯ ವಿರುದ್ಧ ಹೋರಾಡಿದ ಡಾ. ಅಂಬೇಡ್ಕರ್ ಅವರ ಜೀವನ ಹಾಗೂ ಶಿಕ್ಷಣದ ಹಂಬಲವು ಎಲ್ಲರಿಗೂ ಮಾದರಿಯಾಗಿದೆ. ಅಂಬೇಡ್ಕರ್ ಎಂದರೆ ಸಂವಿಧಾನ ಶಿಲ್ಪಿ ಹಾಗೂ ದಲಿತರ ಪರ ಹೋರಾಟಗಾರ ಎಂಬುದು ನಮ್ಮೆಲ್ಲರಿಗೂ ನೆನಪಾಗುತ್ತದೆ ಎಂದು ಹೇಳಿದರು.

ಅದೇ ವೇಳೆ ಪರಮಪೂಜ್ಯ ನಾರಾಯಣ ಗುರು ಅವರ ತತ್ವಾದರ್ಶಗಳೊಂದಿಗೆ ಅಂಬೇಡ್ಕರ್ ಅವರ ವಿಚಾರಧಾರೆಯಲ್ಲಿಯೂ ಸಾಮ್ಯತೆ ಇದ್ದು, ಇಬ್ಬರೂ ಶಿಕ್ಷಣಕ್ಕೆ ಮೊದಲ ಪ್ರಾಮುಖ್ಯತೆ ನೀಡಿ ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದರು ಎಂದು ಅಭಿಪ್ರಾಯಪಟ್ಟರು.
ದೇಶದ ಸಂವಿಧಾನ ರಚನೆಯಲ್ಲಿ ಅಂಬೇಡ್ಕರ್ ಅವರ ಪಾತ್ರ ಅಪಾರವಾಗಿದ್ದು, ಅವರ ವಿಚಾರಗಳನ್ನು ಜಯಂತಿಯ ದಿನಕ್ಕೆ ಮಾತ್ರ ಸೀಮಿತಗೊಳಿಸದೆ, ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಂಗಳೂರು ಘಟಕದ ಅಧ್ಯಕ್ಷ ಹರೀಶ್ ಕೆ. ಸುವರ್ಣ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಸಮರ್ಥ್ ರಾಜೇಂದ್ರ ಅವರನ್ನು ಸಮ್ಮಾನಿಸಲಾಯಿತು. ಯುವವಾಹಿನಿ ಕೇಂದ್ರ ಸಮಿತಿಯ ದ್ವಿತೀಯ ಉಪಾಧ್ಯಕ್ಷ ಸುರೇಶ್ ಪೂಜಾರಿ ಅತಿಥಿಯಾಗಿ ಭಾಗವಹಿಸಿದ್ದರು. ಸಮಾಜ ಸೇವಾ ನಿರ್ದೇಶಕ ದಿನೇಶ್ ಕಂದಾವರ ಸ್ವಾಗತಿಸಿ, ಕಾರ್ಯದರ್ಶಿ ಉಷಾ ಕೆ. ವಂದಿಸಿದರು. ಕಾರ್ಯಕ್ರಮವನ್ನು ಸದಸ್ಯ ಸತೀಶ್ ಕೆ. ನಿರೂಪಿಸಿದರು.


