ಉಪ್ಪಿನಂಗಡಿ : ಯುವವಾಹಿನಿ (ರಿ.) ಉಪ್ಪಿನಂಗಡಿ ಘಟಕದ ಮಹತ್ವಾಕಾಂಕ್ಷಿ ಯೋಜನೆ ಯುವಬಾಂಧವ್ಯ ಮತ್ತು ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 29 ರಂದು ಘಟಕದ ಸಂಘಟನಾ ಕಾರ್ಯದರ್ಶಿ ಅಭಿನಂದನ್ ಅವರ ನಿವಾಸದಲ್ಲಿ ಯಶಸ್ವಿಯಾಗಿ ಜರುಗಿತು.
ಕಾರ್ಯಕ್ರಮವನ್ನು ಮನೆಯ ಹಿರಿಯರಾದ ಡೀಕಯ್ಯ ಪೂಜಾರಿಯವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಘಟಕದ ಅಧ್ಯಕ್ಷರಾದ ಮನೋಜ್ ಎನ್. ಸಾಲ್ಯಾನ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಘಟಕ ವ್ಯಾಪ್ತಿಯ ಸದಸ್ಯರ ಮನೆಗಳಲ್ಲಿ ‘ಯುವ ಬಾಂಧವ್ಯ’ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಸದಸ್ಯರ ನಡುವೆ ಆತ್ಮೀಯ ಸಂಬಂಧವನ್ನು ವೃದ್ಧಿಸುವುದು ಸಂಘಟನೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿ, ಎಲ್ಲರನ್ನೂ ಸ್ವಾಗತಿಸಿದರು.

ಮಹಿಳಾ ದಿನಾಚರಣೆ ಮತ್ತು ಸನ್ಮಾನ:
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ನಿವೃತ್ತ ಅಂಗನವಾಡಿ ಸಹಾಯಕಿ ವಿಮಲಾ ಅವರನ್ನು ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಿಕ್ಷಣ ಇಲಾಖೆಯ ಕೋಡಿಂಬಾಡಿ ಕ್ಲಸ್ಟರ್ ಸಂಯೋಜಕಿ ದೇವಿಕಾ ಅವರು ಮಾತನಾಡಿ, “ಮಹಿಳೆಯರು ಸಮಾಜದಲ್ಲಿ ಕೀಳರಿಮೆಯನ್ನು ಬಿಟ್ಟು, ಶೋಷಣೆಯ ವಿರುದ್ಧ ಧ್ವನಿ ಎತ್ತಿ ಮುನ್ನಡೆಯಬೇಕು. ಸ್ವಾತಂತ್ರ್ಯವು ಎಂದಿಗೂ ಸ್ವೇಚ್ಛೆಯಾಗಬಾರದು. ಸಂಸಾರದಲ್ಲಿ ಅರಿತು ಬೆರೆತು ಬಾಳುವ ಸಂಸ್ಕೃತಿಯೊಂದಿಗೆ ಮಹಿಳಾ ಸಬಲೀಕರಣ ಸಾಧ್ಯವಾಗಬೇಕು,” ಎಂದು ಕರೆ ನೀಡಿದರು. ಅಲ್ಲದೆ, ಯುವವಾಹಿನಿಯ ಇಂತಹ ಸಾಮಾಜಿಕ ಚಿಂತನೆಯ ಕಾರ್ಯಕ್ರಮಗಳನ್ನು ಶ್ಲಾಘಿಸಿದರು.
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಮಾತನಾಡಿ, ಸಂಘಟನೆಯ ಧ್ಯೇಯೋದ್ದೇಶಗಳಾದ ವಿದ್ಯೆ, ಉದ್ಯೋಗ ಮತ್ತು ಸಂಪರ್ಕವನ್ನು ಜೀವನದಲ್ಲಿ ಅಳವಡಿಸಿಕೊಂಡು ಸದಸ್ಯರು ವ್ಯಕ್ತಿತ್ವ ವಿಕಸನ ಮಾಡಿಕೊಳ್ಳಬೇಕು ಎಂದರು.
ಘಟಕದ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಪೂಜಾರಿ ಮತ್ತು ನಿಕಟಪೂರ್ವ ಅಧ್ಯಕ್ಷರಾದ ನಾಣ್ಯಪ್ಪ ಕೋಟ್ಯಾನ್ ಅವರು ಮಾತನಾಡಿ, ಮನೆ ಮನೆಗೆ ತಲುಪುವ ಇಂತಹ ಬಾಂಧವ್ಯದ ಕಾರ್ಯಕ್ರಮಗಳು ಸಂಘಟನೆಯನ್ನು ಮತ್ತಷ್ಟು ಬಲಿಷ್ಠಗೊಳಿಸುತ್ತವೆ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರಮೇಶ್ ಸಾಂತ್ಯ ಅವರು ವರದಿ ಮಂಡಿಸಿದರು. ವ್ಯಕ್ತಿತ್ವ ವಿಕಸನ ನಿರ್ದೇಶಕಿ ವನಿತಾ ಕೃಷ್ಣಪ್ಪ ಕಾರ್ಯಕ್ರಮ ನಿರೂಪಿಸಿ, ಜೊತೆ ಕಾರ್ಯದರ್ಶಿ ನಯನಾ ಮನೋಹರ್ ವಂದಿಸಿದರು.


