ಕೊಲ್ಯ: “ನಿಮ್ಮ ಆರೋಗ್ಯ ನಿಮ್ಮ ಕಾಲು ಮತ್ತು ಕೈಗಳಲ್ಲಿ” ಎಂಬ ಧ್ಯೇಯವಾಕ್ಯದೊಂದಿಗೆ, ಯುವವಾಹಿನಿ (ರಿ) ಕೊಲ್ಯ ಘಟಕ ಮತ್ತು ಮಂಗಳೂರಿನ ಕಂಪಾನಿಯೋ ಶ್ರೀದೇವಿ ವೆಲ್ನೆಸ್ ಸೆಂಟರ್ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಆರೋಗ್ಯ ಮಾಹಿತಿ ಕಾರ್ಯಕ್ರಮವು ದಿನಾಂಕ 06-04-2026 ರಂದು ಕೊಲ್ಯದ ನಾರಾಯಣ ಗುರು ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು.
ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ) ಕೊಲ್ಯ, ಸೋಮೇಶ್ವರ ಇವರ ಸಹಕಾರದೊಂದಿಗೆ ನಡೆಯುತ್ತಿರುವ 15 ದಿನಗಳ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಭಾಗವಾಗಿ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮವನ್ನು ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ನ ಅಧ್ಯಕ್ಷರಾದ ವೇಣು ಗೋಪಾಲ್ ಕೊಲ್ಯ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಆಧುನಿಕ ಜೀವನಶೈಲಿಯಲ್ಲಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಫೂಟ್ ಪಲ್ಸ್ ಥೆರಪಿ ಶಿಬಿರದ ಮಹತ್ವವನ್ನು ಶ್ಲಾಘಿಸಿದರು ಹಾಗೂ ಆಯೋಜಕ ಸಂಸ್ಥೆಗಳನ್ನು ಅಭಿನಂದಿಸಿದರು. ಯುವವಾಹಿನಿ (ರಿ) ಕೊಲ್ಯ ಘಟಕದ ಅಧ್ಯಕ್ಷರಾದ ನಿತಿನ್ ಕರ್ಕೇರ ಅವರು ಮಾತನಾಡಿ, ಶಿಬಿರಕ್ಕೆ ಸಾರ್ವಜನಿಕರಿಂದ ದೊರೆಯುತ್ತಿರುವ ಅಭೂತಪೂರ್ವ ಸ್ಪಂದನೆಗೆ ಸಂತಸ ವ್ಯಕ್ತಪಡಿಸಿದರು. ಸಹಕರಿಸಿದ ಶ್ರೀದೇವಿ ವೆಲ್ನೆಸ್ ಸಂಸ್ಥೆ ಮತ್ತು ಬಿಲ್ಲವ ಸೇವಾ ಸಮಾಜ ಟ್ರಸ್ಟ್‌ಗೆ ಕೃತಜ್ಞತೆ ಸಲ್ಲಿಸಿದರು.

ಕಂಪಾನಿಯೋ ಸಂಸ್ಥೆಯ ಜೋನಲ್ ಹೆಡ್ ರತ್ನಾಕರ ಶೆಟ್ಟಿ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ರೋಗಗಳ ನಿಯಂತ್ರಣ, ತಡೆಗಟ್ಟುವಿಕೆ ಮತ್ತು ಫೂಟ್ ಥೆರಪಿಯಿಂದ ಆಗುವ ವೈದ್ಯಕೀಯ ಪ್ರಯೋಜನಗಳ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ವೇದಿಕೆಯಲ್ಲಿ ನಾರಾಯಣ ಗುರು ಮಹಿಳಾ ಮಂಡಳಿಯ ಅಧ್ಯಕ್ಷರಾದ ತ್ರಿವೇಣಿ ಉದಯ ಕುಂಪಲ ಹಾಗೂ ಯುವವಾಹಿನಿ ಕೊಲ್ಯ ಘಟಕದ ಆರೋಗ್ಯ ನಿರ್ದೇಶಕಿ ಯಶಸ್ವಿನಿ ಕುಂಪಲ ಉಪಸ್ಥಿತರಿದ್ದರು. ಈ ವಿಶೇಷ ಆರೋಗ್ಯ ಮಾಹಿತಿ ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಶಿಬಿರಾರ್ಥಿಗಳು ಪಾಲ್ಗೊಂಡು ತಜ್ಞರಿಂದ ಮಾಹಿತಿ ಹಾಗೂ ಮಾರ್ಗದರ್ಶನ ಪಡೆದರು.
ಕಂಪಾನಿಯೋ ಸಂಸ್ಥೆಯ ಮಂಗಳೂರು ವಿಭಾಗದ ನಿರ್ದೇಶಕರಾದ ಶ್ರೀಧರ್ ಪೂಜಾರಿ ಅವರು ಅತಿಥಿಗಳನ್ನು ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.


