ಹಳೆನೇರೆಂಕಿ: ಯುವವಾಹಿನಿ (ರಿ.) ಕಡಬ ಘಟಕ ಮತ್ತು ಬಿಲ್ಲವ ಗ್ರಾಮ ಸಮಿತಿ ಹಳೆನೇರೆಂಕಿಯ ಮಹಿಳಾ ಘಟಕದ ಆಶ್ರಯದಲ್ಲಿ ಮಹಿಳಾ ದಿನಾಚರಣೆ ಕಾರ್ಯಕ್ರಮವು ಮಾರ್ಚ್ 22 ರಂದು ಹಳೆನೇರೆಂಕಿಯ ವ್ಯವಸಾಯ ಸೇವಾ ಸಹಕಾರಿ ಸಂಘದಲ್ಲಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆ ಮಹಿಳೆಯರು ಹಾಗೂ ಮಕ್ಕಳಿಗಾಗಿ ವಿವಿಧ ಆಟೋಟ ಸ್ಪರ್ಧೆಗಳು ಆಯೋಜಿಸಲಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮವನ್ನು ಪುರುಷೋತ್ತಮ ಬರಂಬೆಟ್ಟು ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಘಟಕದ ಉಪಾಧ್ಯಕ್ಷೆ ಸರಿತಾ ಉಂಡಿಲ ಅವರು ಅತಿಥಿಗಳು ಹಾಗೂ ಸಭಿಕರನ್ನು ಸ್ವಾಗತಿಸಿದರು.
ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಸಂಯೋಜಕ ಅಶ್ವಿನಿ ಕೆ ಅವರು ಮಹಿಳೆಯರು ಹಾಗೂ ಮಕ್ಕಳಿಗೆ ಪ್ರೇರಣಾದಾಯಕ ಮಾರ್ಗದರ್ಶನ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿನಿಯರಾದ ರೂಪಿಕಾ ಮತ್ತು ರೂಪಿತಾ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಕೃಷಿಕ ಮಹಿಳೆ ದೇವಕಿ ಅವರು ಮಹಿಳೆಯರ ಭವಿಷ್ಯ ನಿರ್ಮಾಣದ ಕುರಿತು ಸ್ಪೂರ್ತಿದಾಯಕ ಮಾತುಗಳನ್ನಾಡಿದರು. ಗ್ರಾಮ ಪಂಚಾಯತ್‌ನ ನಿಕಟಪೂರ್ವ ಅಧ್ಯಕ್ಷೆ ಸುಚೇತಾ ಬರಂಬೆಟ್ಟು ಹಾಗೂ ಮಹಿಳಾ ಘಟಕದ ಸದಸ್ಯರು ಯುವವಾಹಿನಿ ಕಡಬ ಘಟಕ ಮತ್ತು ಅಶ್ವಿನಿ ಕೆ ಅವರನ್ನು ಸನ್ಮಾನಿಸಿ ಗೌರವಿಸಿದರು.

ಯುವವಾಹಿನಿ ಕಡಬ ಘಟಕದ ಅಧ್ಯಕ್ಷ ಉಮೇಶ್ ಬಳ್ಪ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು ಕಾರ್ಯಕ್ರಮದಲ್ಲಿ ಕೇಂದ್ರ ಸಮಿತಿಯ ಪ್ರಚಾರ ನಿರ್ದೇಶಕ ಶಿವಪ್ರಸಾದ್ ನೂಚಿಲ, ಸಂಘಟನಾ ಕಾರ್ಯದರ್ಶಿ ಸುಂದರ ಪೂಜಾರಿ ಅಂಗಣ ಸೇರಿದಂತೆ ಘಟಕದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಲೆ ಮತ್ತು ಸಾಹಿತ್ಯ ನಿರ್ದೇಶಕಿ ಅನಿತಾ ಕುತ್ಯಾಡಿ ಅವರು ನಿರೂಪಿಸಿದರು. ಬೇಬಿ ತನ್ವಿ ಕುತ್ಯಾಡಿ ಪ್ರಾರ್ಥನೆ ಸಲ್ಲಿಸಿದರು. ಕೊನೆಯಲ್ಲಿ ಸುಚೇತಾ ಬರಂಬೆಟ್ಟು ಅವರು ಧನ್ಯವಾದ ಅರ್ಪಿಸಿದರು.


