ಉಡುಪಿ : ಭಾರತೀಯ ಸಂಸ್ಕ್ರತಿಯಲ್ಲಿ ಕುಟುಂಬ ವ್ಯವಸ್ಥೆಯೆ ಪ್ರಧಾನವಾದುದು. ರಾಷ್ಟ್ರಭಕ್ತಿ, ಶ್ರದ್ಧೆ, ಒಕ್ಕೂಟ ವ್ಯವಸ್ಥೆ, ಸಾಮಾಜಿಕ ಮೌಲ್ಯಗಳಿಗೆ ಸದಾ ಪ್ರೇರಣೆಗಳಾಗುವುದು ಕುಟುಂಬ ವ್ಯವಸ್ಥೆಯಿಂದ. ಆಧುನಿಕ ದಿನಮಾನದಲ್ಲಿ ಎಲ್ಲಾ ಎಲ್ಲೆಗಳನ್ನು ಮೀರಿ ಕುಟುಂಬದ ಉಳಿವಿಗೆ ಹೆಚ್ಚು ಸಹಕಾರಿಯಾಗುವುದು ಸಂಘಟನಾ ಸಹಭಾಗಿತ್ವ ಎಂದು ಕರ್ನಾಟಕ ಸರಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ತಾರಾನಾಥ ಪೂಜಾರಿ ಅಭಿಪ್ರಾಯಪಟ್ಟರು.

ಯುವವಾಹಿನಿಯಂತಹ ಸಂಘಟನೆ ತತ್ವ ಸಿದ್ದಾಂತಗಳಿಗೆ ಬದ್ದವಾಗಿ ಮಾತೃವಾತ್ಸಲ್ಯದ ರೀತಿಯಲ್ಲಿ ಸದಸ್ಯರನ್ನು ಪ್ರೇರೇಪಿಸುತ್ತಾ ಸಂಘಟನೆ ಮತ್ತು ಸೇವಾ ಪ್ರಜ್ಞೆಯನ್ನು ಜಾಗೃತಗೊಳಿಸುತ್ತಿರುವುದು ಶ್ಲಾಘನೀಯ ಎಂದರು.
ರಜತ ಮಹೋತ್ಸವದ ಸವಿ ನೆನಪಿನ ಸ್ಮರಣ ಸಂಚಿಕೆ ‘ರಜತಸ್ಮ್ರತಿ’ ಯನ್ನು ಚಿಂತಕರಾದ ಸೂರ್ಯಪ್ರಕಾಶ್ ಕಪ್ಪೆಟ್ಟು ಬಿಡುಗಡೆ ಮಾಡಿದರು.
ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ಶ್ರೀ ದಯಾನಂದ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಜತ ಸಂಭ್ರಮ ಸಂಚಾಲಕರಾದ ರಘುನಾಥ ಮಾಬಿಯಾನ್ ಗೌರವ ಉಪಸ್ಥಿತರಿದ್ದರು. ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಪಡ್ಪು, ಗುರುಬೆಳದಿಂಗಳು ಸಂಸ್ಥೆಯ ಪದ್ಮರಾಜ್ ಆರ್ ಪೂಜಾರಿ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇಗುಲದ ಕಾರ್ಯನಿರ್ವಹಣಾಧಿಕಾರಿ ಶ್ವೇತಾ ಪಳ್ಳಿ, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷರಾದ ಸಂಪತ್ ಬಿ ಸುವರ್ಣ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಧ್ಯಕ್ಷರಾದ ಮಹೇಶ್ ಅಂಚನ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ಘಟಕವನ್ನು ಇಪ್ಪತ್ತೈದು ವರ್ಷಗಳಿಂದ ಮುನ್ನಡೆಸಿದ ಎಲ್ಲಾ ಮಾಜಿ ಅಧ್ಯಕ್ಷರನ್ನು ಗೌರವಿಸಲಾಯಿತು. ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರಾದ ಸಂತೋಷ್ ಕುಮಾರ್ ಸ್ವಾಗತಿಸಿದರು, ಮಾಜಿ ಅಧ್ಯಕ್ಷರಾದ ಅಶೋಕ್ ಕೋಟ್ಯಾನ್ ವಂದಿಸಿದರು. ರಾಜ್ಯಪ್ರಶಸ್ತಿ ಪುರಸ್ಕೃತ ಶಿಕ್ಷಕ ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು.


