ಬ್ರಹ್ಮಾವರ: ಯುವವಾಹಿನಿ (ರಿ.) ಉಡುಪಿ ಘಟಕದ ಮಹತ್ವಾಕಾಂಕ್ಷೆಯ ‘ತಲೆಗೊಂದು ಸೂರು’ ಯೋಜನೆಯಡಿ ಬ್ರಹ್ಮಾವರ ತಾಲೂಕಿನ ಮಟಪಾಡಿ ಗ್ರಾಮದ ಅಂಜಾಲು ನಿವಾಸಿ ಸುಮಿತ್ರಾ ಪೂಜಾರಿ ಅವರಿಗೆ 19.10.2025ರಂದು ನೂತನವಾಗಿ ನಿರ್ಮಿಸಿದ ಮನೆ ‘ಶ್ರೀ ಗುರು ನಿಲಯ’ವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಭಾವಚಿತ್ರವನ್ನು ನೀಡಿ, ಮನೆ ಹಸ್ತಾಂತರ ಕಾರ್ಯಕ್ರಮವನ್ನು ಗೌರವಪೂರ್ಣವಾಗಿ ನೆರವೇರಿಸಲಾಯಿತು. ಸಮಾಜಸೇವೆಯ ಪರಂಪರೆಯನ್ನು ಮುಂದುವರಿಸುತ್ತಿರುವ ಯುವವಾಹಿನಿ ಉಡುಪಿ ಘಟಕವು ಇದುವರೆಗೆ ಒಟ್ಟು 7 ಮನೆಗಳನ್ನು ನಿರ್ಮಿಸಿ, 3 ಮನೆಗಳನ್ನು ಸಂಪೂರ್ಣ ದುರಸ್ತಿ ಮಾಡಿ ಫಲಾನುಭವಿಗಳಿಗೆ ಹಸ್ತಾಂತರಿಸಿರುವುದು ಗಮನಾರ್ಹವಾಗಿದೆ.

ಕಾರ್ಯಕ್ರಮದಲ್ಲಿ ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ.ಎನ್. ಶಂಕರ ಪೂಜಾರಿ, ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಪ್ರವೀಣ್ ಎಂ ಪೂಜಾರಿ, ಬ್ರಹ್ಮಾವರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷರಾದ ಬಿರ್ತಿ ರಾಜೇಶ್ ಶೆಟ್ಟಿ, ಲೋಕಾಯುಕ್ತ ಇಲಾಖೆಯ ಅಧಿಕಾರಿ ಮಂಜುನಾಥ ಶಂಕರಳ್ಳಿ, ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ, ರಜತ ಮಹೋತ್ಸವ ಸಮಿತಿ ಸಂಚಾಲಕರಾದ ರಘುನಾಥ ಮಾಬಿಯಾನ್, ಕಾರ್ಯದರ್ಶಿ ಮಹೇಶ್ ಮಲ್ಪೆ, ಕೋಶಾಧಿಕಾರಿ ಕುಶಲ್ ಜತ್ತನ್ ಹಾಗೂ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಮನೆ ನಿರ್ಮಾಣದ ಗುತ್ತಿಗೆದಾರರಾದ ಸಂದೇಶ್ ಮಟಪಾಡಿ ಮತ್ತು ದಾನಿಗಳನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು.


