ಬಜಪೆ: ಸಂಸ್ಕೃತಿಗಳು ನಿಧಾನವಾಗಿ ನಶಿಸುತ್ತಿರುವ ಇಂದಿನ ಕಾಲಘಟ್ಟದಲ್ಲಿ, ಯುವಜನತೆಗೆ ಮಾದರಿಯಾಗುವ ಕಾರ್ಯವನ್ನು ಯುವವಾಹಿನಿ (ರಿ) ಬಜಪೆ ಘಟಕ ಕೈಗೊಂಡಿದೆ. ಪ್ರತಿ ವರ್ಷ ಹಿರಿಯರನ್ನು ಗೌರವಿಸುವ ಮೂಲಕ ಸಂಸ್ಕೃತಿ ಮತ್ತು ಸಂಸ್ಕಾರಗಳ ಮಹತ್ವವನ್ನು ತಿಳಿಸುವ ಉದ್ದೇಶದಿಂದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾ ಬಂದಿರುವ ಘಟಕವು, ಈ ವರ್ಷವೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿತು.

ದಿನಾಂಕ 18-03-2026 ರಂದು ಬಜಪೆಯ ಅಂಬಿಕಾ ನಗರದಲ್ಲಿರುವ “ಶ್ರೀ ವೈಭವ ಲಕ್ಷ್ಮಿ” ನಿವಾಸಕ್ಕೆ ಭೇಟಿ ನೀಡಿದ ಘಟಕದ ಸದಸ್ಯರು, 82 ವರ್ಷ ಪ್ರಾಯದ ಹಿರಿಯರಾದ ಸುಮತಿ ಪೂಜಾರ್ತಿ ಅವರನ್ನು ಗೌರವಿಸಿದರು. ತಮ್ಮ ಹಿರಿ ವಯಸ್ಸಿನಲ್ಲಿಯೂ ದಾಸರ ಭಜನೆ, ಯಕ್ಷಗಾನ ಭಾಗವತಿಕೆ ಮತ್ತು ಕುಣಿತದಲ್ಲಿ ತೊಡಗಿ ಯುವಜನತೆಗೆ ಪ್ರೇರಣೆಯಾಗಿರುವ ಸುಮತಿ ಪೂಜಾರ್ತಿ ಅವರು, ಸಂಸ್ಕೃತಿ ಸಂರಕ್ಷಣೆಗೆ ಜೀವಂತ ಮಾದರಿಯಾಗಿದ್ದಾರೆ.
ಈ ಸಂದರ್ಭದಲ್ಲಿ ಸ್ಥಾಪಕ ಅಧ್ಯಕ್ಷರಾದ ವಿನೋದ ಪೂಜಾರಿ ಮಾತನಾಡಿ, “ಹಿರಿಯ ಮಹಿಳೆಯರನ್ನು ಗೌರವಿಸುವ ಮೂಲಕ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ನಮ್ಮ ಘಟಕದ ವಿಶೇಷತೆ. ಇದು ಯುವಜನತೆಗೆ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಸಹಕಾರಿಯಾಗಿದೆ” ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಯುವವಾಹಿನಿ ಸದಸ್ಯರು ಭಜನೆ ಹಾಗೂ ಯಕ್ಷಗಾನ ಕುಣಿತವನ್ನು ನಡೆಸಿ ಸಂತೋಷದ ಕ್ಷಣಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ರೋಹಿತ್ ಪೂಜಾರಿ ವಹಿಸಿಕೊಂಡಿದ್ದರು. ಮಹಿಳಾ ಸಂಘಟನಾ ನಿರ್ದೇಶಕಿ ರೋಹಿಣಿ ರಾಜೇಶ್ ಸ್ವಾಗತಿಸಿದರು. ಕಾರ್ಯದರ್ಶಿ ಸುಚಿತಾ ದೇವರಾಜ್ ಧನ್ಯವಾದಗಳನ್ನು ಸಲ್ಲಿಸಿದರು.


