ಉಡುಪಿ : ಸಂಘಸಂಸ್ಥೆಗಳು ನಿರ್ದಿಷ್ಟ ಉದ್ದೇಶಗಳನ್ನು ಸಾಧಿಸುವಂತಿರಬೇಕು. ಈ ನಿಟ್ಟಿನಲ್ಲಿ ವಿದ್ಯೆ,ಉದ್ಯೋಗ,ಸಂಪರ್ಕ ಧ್ಯೇಯದೊಂದಿಗೆ ಸಮುದಾಯದ ಅಭಿವೃದ್ದಿಗೆ ಶ್ರಮಿಸುತ್ತಿರುವ ಯುವವಾಹಿನಿ ಸಂಘಟನೆಯನ್ನು ಅರ್ಹವಾಗಿ ಸೇವಾ ಸಂಜೀವಿನಿಯೆನ್ನಬಹುದೆಂದು ಕರ್ನಾಟಕ ಸರಕಾರ ನಗರಾಭಿವೃದ್ಧಿ ಇಲಾಖೆಯ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ ಹೆಚ್.ಕೆ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀಯುತರು ಉಡುಪಿ ಯುವವಾಹಿನಿಯ ರಜತ ಸಂಭ್ರಮವನ್ನು ಬ್ರಹ್ಮಶ್ರೀ ನಾರಾಯಣ ಗುರುಗಳು ಕರಮುಕ್ಕು ದೇಗುಲದಲ್ಲಿ ಪ್ರತಿಷ್ಠಾಪಿಸಿದ ದೀಪದ ಮಾದರಿಯನ್ನು ಪ್ರಜ್ವಲಿಸಿ ಸಂಸ್ಥೆಯು ನಡೆಸಿದ ಸಾಮಾಜಿಕ ಹಾಗೂ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ವಿಶೇಷ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಜತ ಸಂಭ್ರಮ ಸಂಚಾಲಕರಾದ ರಘುನಾಥ್ ಮಾಬಿಯಾನ್ ಗೌರವ ಉಪಸ್ಥಿತರಿದ್ದರು.

ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಸಂಗ್ರಹಿಸಿದ ‘ಗುರುವಾಣಿ’ ಕೃತಿಯನ್ನು ರಾಷ್ಟ್ರೀಯ ಬಿಲ್ಲವ ಮಹಾಮಂಡಲದ ಅಧ್ಯಕ್ಷರಾದ ಸೂರ್ಯಕಾಂತ ಜೆ ಸುವರ್ಣ ಬಿಡುಗಡೆ ಮಾಡಿದರು. ಸೃಜನಶೀಲ ವಾಗ್ಮಿ ದಿನೇಶ್ ಸುವರ್ಣ ರಾಯಿ ಯುವ ನುಡಿಯನ್ನಾಡಿದರು. ಬನ್ನಂಜೆ ಬಿಲ್ಲವರ ಸೇವಾ ಸಂಘದ ಅಧ್ಯಕ್ಷರಾದ ಶಶಿಧರ ಅಮೀನ್ ,ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ಪೂಜಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಶೈಕ್ಷಣಿಕ ಕ್ಷೇತ್ರದ ಸಾಧಕರಾದ ಡಾ. ಸುನೀತಾ ವಿ, ಉದ್ಯಮ ಕ್ಷೇತ್ರದ ಸಾಧಕರಾದ ರಾಮಚಂದ್ರ ಮಾಬಿಯಾನ್ , ಪ್ರಕಾಶ್ ಕರ್ಕೇರ , ಪ್ರಭಾಕರ ಪೂಜಾರಿ ಹಾಗೂ ಬನ್ನಂಜೆ ಬಿಲ್ಲವರ ಸೇವಾ ಸಂಘಕ್ಕೆ ‘ರಜತ ರತ್ನ’ ಗೌರವಾರ್ಪಣೆ ನಡೆಸಲಾಯಿತು. ರಜತ ಸಂಭ್ರಮ ಪ್ರಯುಕ್ತ ಗುರುಗಳ ವಿಚಾರಧಾರೆಯಲ್ಲಿ ಹಮ್ಮಿಕೊಂಡ ಇಪ್ಪತ್ತೈದು ಸ್ಪರ್ಧೆಗಳ ಬಹುಮಾನವನ್ನು ಈ ಸಂದರ್ಭದಲ್ಲಿ ವಿತರಿಸಲಾಯಿತು.
ಮಾಜಿ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಸ್ವಾಗತಿಸಿ , ಮಾಜಿ ಅಧ್ಯಕ್ಷರಾದ ಜಗದೀಶ್ ಕುಮಾರ್ ವಂದಿಸಿದರು. ಶ್ರೀ ತೇಜಸ್ ಜೆ ಬಂಗೇರ ಕಾರ್ಯಕ್ರಮ ನಿರೂಪಿಸಿದರು.


