ಮಂಗಳೂರು: “ಒಬ್ಬ ಸುಸಂಸ್ಕೃತ ಮಹಿಳೆ ತನ್ನ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ದೇಶ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಹೆಣ್ಣು ತಾನು ಹುಟ್ಟಿದ ಮನೆ ಹಾಗೂ ಸೇರಿದ ಗಂಡನ ಮನೆಯ ಹಿತ ಬಯಸುವವಳು,” ಎಂದು ಡಿವೈನ್ ಪಾರ್ಕ್‌ನ ಮಹಿಳಾ ಮೇಲ್ಮೈ ಅಧಿಕಾರಿ ಪ್ರೇಮ ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.
ಅವರು ದಿನಾಂಕ 08-03-2026 ರಂದು ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸ್ವಾಮಿ ವಿವೇಕಾನಂದರ ವಿಚಾರಧಾರೆಗಳನ್ನು ಪ್ರಸ್ತಾಪಿಸಿದ ಅವರು, ಮಹಿಳೆಯರು ಸಮಾಜದ ಶಕ್ತಿಯಾಗಬೇಕು ಎಂದು ಹಿತವಚನ ನೀಡಿದರು.

’ಸಖಿ-ಸಂವಾದ’ಕ್ಕೆ ಆಹ್ವಾನ:
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಹಿಳಾ ಸಂಘಟನಾ ನಿರ್ದೇಶಕಿ ಶ್ರೀಮತಿ ಸುಧಾ ಸುರೇಶ್ ಅವರು ಮಹಿಳೆಯರ ಮಹತ್ವದ ಬಗ್ಗೆ ವಿಚಾರ ಮಂಡಿಸಿದರು. ಇದೇ ಸಂದರ್ಭದಲ್ಲಿ ಮಾರ್ಚ್ 14, 2026 ರಂದು ನಡೆಯಲಿರುವ ಕೇಂದ್ರ ಸಮಿತಿಯ ವಿಶೇಷ ಕಾರ್ಯಕ್ರಮ ‘ಸಖಿ-ಸಂವಾದ’ದ ಆಹ್ವಾನ ಪತ್ರಿಕೆಯನ್ನು ಬಿಡುಗಡೆಗೊಳಿಸಿ, ಎಲ್ಲರಿಗೂ ಆಮಂತ್ರಣ ನೀಡಿದರು.
ಗಣ್ಯರ ಉಪಸ್ಥಿತಿ: ವೇದಿಕೆಯಲ್ಲಿ ಕೊಲ್ಯ ಘಟಕದ ಅಧ್ಯಕ್ಷರಾದ ನಿತೇಶ್ ಕರ್ಕೇರ, ಸ್ಥಾಪಕಾಧ್ಯಕ್ಷರಾದ ಸುರೇಶ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಸುರೇಖಾ ಮೋಹನ್ ಅತಿಥಿಗಳನ್ನು ಸ್ವಾಗತಿಸಿದರು. ಮಹಿಳಾ ಸಂಘಟನಾ ನಿರ್ದೇಶಕಿ ದೇವಕಿ ಕಿಶೋರ್ ಧನ್ಯವಾದ ಸಮರ್ಪಿಸಿದರು.
ಆಟೋಟ ಮತ್ತು ಸಂಭ್ರಮ: ಸಭಾ ಕಾರ್ಯಕ್ರಮದ ನಂತರ ಮಹಿಳಾ ಸದಸ್ಯರಿಗಾಗಿ ವಿವಿಧ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಘಟಕದ ಮಾಜಿ ಅಧ್ಯಕ್ಷರಾದ ಸುಮ ವಸಂತ್ ಕಾರ್ಯಕ್ರಮ ನಿರ್ವಹಿಸಿದರು. ಸ್ಪರ್ಧೆಗಳ ಉಸ್ತುವಾರಿಯನ್ನು ಮಾಜಿ ಅಧ್ಯಕ್ಷರುಗಳಾದ ಪೃಥ್ವಿರಾಜ್, ರಾಹುಲ್ ಸನಿಲ್ ಮತ್ತು ರೋಹಿತ್ ಕುಮಾರ್ ವಹಿಸಿದ್ದರು.


