ಕಾಪು: ಸಮಾಜದ ಯುವ ಸಮುದಾಯವನ್ನು ಪರಸ್ಪರ ಸಂಪರ್ಕದಲ್ಲಿರಿಸಿ ಒಗ್ಗಟ್ಟಿನಿಂದ ಸಮಾಜ ಸೇವೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ “ಸ್ನೇಹ ಸಮ್ಮಿಲನ–2026” ಕಾರ್ಯಕ್ರಮವನ್ನು ದಿನಾಂಕ 8-03-2026 ರಂದು ಕಾಪು ಸಮೀಪದ ನೆಕ್ಸಸ್ ಹೋಂಸ್ಟೇನಲ್ಲಿ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಅವರು ಶ್ರೀ ಗುರುವರ್ಯರಿಗೆ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸ್ನೇಹದ ಮಹತ್ವವನ್ನು ವಿವರಿಸಿ, ಸದಸ್ಯರು ಪರಸ್ಪರ ಸಹಕಾರ ಮತ್ತು ಒಗ್ಗಟ್ಟಿನಿಂದ ಸಂಘಟನೆಯ ಕಾರ್ಯಚಟುವಟಿಕೆಗಳನ್ನು ಮುಂದುವರೆಸಬೇಕೆಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಲತೀಶ್ ಪೂಜಾರಿ, ಮೊದಲ ಉಪಾಧ್ಯಕ್ಷರಾದ ಮುಕೇಶ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷರು ಹಾಗೂ ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿಎಸ್, ಯಶವಂತ ಪೂಜಾರಿ, ಇಂದಿರಾ ಸುರೇಶ್ ಹಾಗೂ ಮಾರ್ಗದರ್ಶಕರಾದ ಚಂದಪ್ಪ ಸನಿಲ್ ಉಪಸ್ಥಿತರಿದ್ದರು. ಘಟಕದ ಅಧ್ಯಕ್ಷರಾದ ಗೀತಾ ವಸಂತ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಸದಸ್ಯರು ಮತ್ತು ಅವರ ಕುಟುಂಬಸ್ಥರನ್ನು ಸ್ವಾಗತಿಸಿದರು.
ಕಾರ್ಯಕ್ರಮದ ಸಂಚಾಲನೆಯನ್ನು ಹರಿಣಿ ಮಾಲೆಮಾರ್ ನಿರ್ವಹಿಸಿದರು. ನಿರ್ದೇಶಕರಾದ ಮಧುಶ್ರೀ ಪ್ರಶಾಂತ್ ಹಾಗೂ ಕ್ರೀಡಾ ನಿರ್ದೇಶಕರಾದ ಲೋಕೇಶ್ ಪೂಜಾರಿ ಅವರ ನೇತೃತ್ವದಲ್ಲಿ, ಮಾಜಿ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ಅವರ ಸಹಕಾರದಿಂದ ವಿವಿಧ ಆಟೋಟ ಸ್ಪರ್ಧೆಗಳು ಹಾಗೂ ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಯಿತು. ಸ್ಪರ್ಧೆಗಳಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಅಂತ್ಯದಲ್ಲಿ ಆಯೋಜಕರಿಂದ ಭಾಗವಹಿಸಿದ ಎಲ್ಲ ಸದಸ್ಯರು ಹಾಗೂ ಅವರ ಕುಟುಂಬಸ್ಥರಿಗೆ ಕೃತಜ್ಞತೆಗಳನ್ನು ತಿಳಿಸಲಾಯಿತು. ಈ ಸ್ನೇಹ ಸಮ್ಮಿಲನ ಕಾರ್ಯಕ್ರಮವು ಅತ್ಯಂತ ಯಶಸ್ವಿಯಾಗಿ ನೆರವೇರಿತು.


