ಮಂಗಳೂರು/ಗೆಜ್ಜೆಗಿರಿ: ಪರಮಪೂಜ್ಯ ದೇಯಿ ಬೈದ್ಯೆತಿ ಹಾಗೂ ಕೋಟಿ-ಚೆನ್ನಯರ ಮೂಲಸ್ಥಾನವಾದ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇತ್ತೀಚೆಗೆ ನಡೆದ ಜಾತ್ರಾ ಮಹೋತ್ಸವದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ವಿಶೇಷ ಸ್ವಯಂ ಸೇವೆ ಮತ್ತು ಅನ್ನದಾನ ಸೇವಾ ಕಾರ್ಯಕ್ರಮ ಜರುಗಿತು.

ಫೆಬ್ರವರಿ 27ರಂದು ನಡೆದ ಈ ಸಂಭ್ರಮದ ಜಾತ್ರಾ ಮಹೋತ್ಸವದಲ್ಲಿ ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು, ಮಾಜಿ ಅಧ್ಯಕ್ಷರುಗಳು ಹಾಗೂ ಘಟಕದ ಸಕ್ರಿಯ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ಷೇತ್ರದ ವಿವಿಧ ವಿಭಾಗಗಳಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದರು.
ಕ್ಷೇತ್ರಕ್ಕೆ ಆಗಮಿಸುವ ಭಕ್ತಾದಿಗಳ ಅನುಕೂಲಕ್ಕಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳೂರು ಘಟಕದ ವತಿಯಿಂದ ‘ಅನ್ನದಾನ ಸೇವೆ’ಗಾಗಿ ದೇಣಿಗೆಯನ್ನು ಅರ್ಪಿಸಲಾಯಿತು. ಬಳಿಕ ಘಟಕದ ಎಲ್ಲಾ ಸದಸ್ಯರು ಬ್ರಹ್ಮ ಬೈದರುಗಳ ಗಂಧ ಪ್ರಸಾದವನ್ನು ಸ್ವೀಕರಿಸಿ ಕ್ಷೇತ್ರದ ಕೃಪೆಗೆ ಪಾತ್ರರಾದರು. ಸಾಮಾಜಿಕ ಮತ್ತು ಧಾರ್ಮಿಕ ಚಟುವಟಿಕೆಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಯುವವಾಹಿನಿ ಸಂಸ್ಥೆಯ ಈ ಸೇವೆಯನ್ನು ಕ್ಷೇತ್ರದ ಭಕ್ತಾದಿಗಳು ಹಾಗೂ ಆಡಳಿತ ಮಂಡಳಿ ಶ್ಲಾಘಿಸಿದೆ.


