ಪಡುಬಿದ್ರೆ/ಮಂಗಳೂರು : ಮಹಿಳಾ ಸಬಲೀಕರಣಕ್ಕೆ ಕ್ರೀಡೆಯನ್ನೇ ವೇದಿಕೆಯಾಗಿಸಿಕೊಂಡು, ಮಹಿಳಾ ಶಕ್ತಿಯನ್ನು ಸಮಾಜದ ಮುಂದಿಡುವ ಶ್ಲಾಘನೀಯ ಕಾರ್ಯವನ್ನು ಯುವವಾಹಿನಿ (ರಿ.) ಪಡುಬಿದ್ರೆ ಘಟಕ ಯಶಸ್ವಿಯಾಗಿ ನೆರವೇರಿಸಿದೆ.

ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಆಶ್ರಯದಲ್ಲಿ ಸ್ಥಳೀಯ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ “ಬಿಲ್ಲವ ಪ್ರೀಮಿಯರ್ ಲೀಗ್ (BPL) – 2026” ಮಹಿಳಾ ಕ್ರಿಕೆಟ್ ಪಂದ್ಯಾಟವು ಕೇವಲ ಕ್ರೀಡಾಕೂಟವಲ್ಲದೆ, ಸಂಘಟನೆ, ಏಕತೆ ಹಾಗೂ ಸಬಲೀಕರಣದ ಜೀವಂತ ಸಂದೇಶವಾಗಿ ಮೂಡಿಬಂದಿತು.

ಪ್ರಮುಖವಾಗಿ ಯುವವಾಹಿನಿಯ ಮಹಿಳಾ ಸದಸ್ಯರಿಂದಲೇ ಆಯೋಜಿಸಲ್ಪಟ್ಟ ಈ ಪಂದ್ಯಕೂಟವು ಕರಾವಳಿ ವಲಯದಲ್ಲಿ ಪ್ರಥಮ ಬಾರಿಗೆ ಇಂತಹ ವಿಶಿಷ್ಟ ಪ್ರಯತ್ನಕ್ಕೆ ಸಾಕ್ಷಿಯಾಯಿತು. ಕ್ರೀಡಾಂಗಣದಲ್ಲಿ ಉತ್ಸಾಹಭರಿತವಾಗಿ ಆಡಿದ ಮಹಿಳಾ ಕ್ರೀಡಾಪಟುಗಳು, ತಮ್ಮ ಆಟದ ಮೂಲಕ ಆತ್ಮವಿಶ್ವಾಸ, ಶಿಸ್ತು ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲಿಯೂ ಸಮರ್ಥವಾಗಿ ಮುನ್ನಡೆಯಬಲ್ಲರು ಎಂಬುದನ್ನು ಈ ಪಂದ್ಯಾಟ ಸ್ಪಷ್ಟವಾಗಿ ತೋರಿಸಿತು.
ಅದ್ಧೂರಿ ಸಮಾರೋಪ ಸಮಾರಂಭ
ದಿ| ಪಿ. ಕೆ. ದೂಜಪೂಜಾರಿ ವೇದಿಕೆಯಲ್ಲಿ ಭಾನುವಾರ ಸಂಜೆ ನಡೆದ ಪಂದ್ಯಾಕೂಟದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಪಡುಬಿದ್ರಿ ಘಟಕದ ಅಧ್ಯಕ್ಷರಾದ ವಿಧಿತ್ ಪೂಜಾರಿ ಕರ್ನಿರೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ ಮಹಿಳೆಯರ ವೃತ್ತಿಪರ ಮಾದರಿಯ ಭಾಗವಹಿಸುವಿಕೆ ಹೆಮ್ಮೆಯ ವಿಷಯವಾಗಿದ್ದು, ಯುವವಾಹಿನಿಯ ಈ ಪ್ರಯತ್ನ ಶ್ಲಾಘನೀಯ ಎಂದರು. ಕಾಪು ವಿಧಾನಸಭಾ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಕ್ರೀಡಾಪಟುಗಳನ್ನು ಅಭಿನಂದಿಸಿ ಯುವವಾಹಿನಿಯಿಂದ ಮುಂದೆಯೂ ಇಂತಹ ವಿನೂತನ ಕಾರ್ಯಕ್ರಮಗಳು ನಡೆಯಲಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದ ವೇಳೆ ಮಾತನಾಡಿದ ಗಣ್ಯರು, ಮಹಿಳಾ ಕ್ರಿಕೆಟ್ ಆಯೋಜನೆಯ ಮೂಲಕ ಯುವವಾಹಿನಿ ಸಮಾಜಕ್ಕೆ ಅತ್ಯಂತ ಸಕಾರಾತ್ಮಕ ಸಂದೇಶವನ್ನು ನೀಡಿದೆ ಎಂದು ಪ್ರಶಂಸಿಸಿದರು. ಇಂತಹ ವೇದಿಕೆಗಳು ಮಹಿಳೆಯರೊಳಗಿನ ಪ್ರತಿಭೆಯನ್ನು ಹೊರತರಲು, ಅವರ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಮಾನ ಅವಕಾಶಗಳನ್ನು ಒದಗಿಸಲು ಸಹಕಾರಿಯಾಗುತ್ತವೆ. ಯುವವಾಹಿನಿಯ ಈ ಪ್ರಯತ್ನವು ಯುವ ಸಮುದಾಯಕ್ಕೆ ಪ್ರೇರಣೆಯಾಗಿ, ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.
ಕ್ರೀಡೆ ಮೂಲಕ ಮಹಿಳೆಯರನ್ನು ಒಗ್ಗೂಡಿಸಿ, ಸಮಾಜದ ಗಮನವನ್ನು ಅವರ ಸಾಮರ್ಥ್ಯದತ್ತ ಸೆಳೆದಿರುವುದು ಯುವವಾಹಿನಿಯ ಸಾಮಾಜಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ದುಬೈ ವಾರಿಯರ್ಸ್ ಚಾಂಪಿಯನ್
ಫೈನಲ್ ಪಂದ್ಯಾಟದಲ್ಲಿ ಬಲಿಷ್ಠ ದುಬೈ ವಾರಿಯರ್ಸ್ ತಂಡವು ಕ್ವೀನ್ ಇಲೆವೆನ್ ಕುವೈಟ್ ಎ ತಂಡವನ್ನು ಐದು ರನ್ ಗಳಿಂದ ಸೋಲಿಸಿ ಬಿಲ್ಲವ ಪ್ರೀಮಿಯರ್ ಲೀಗ್2026 ಟ್ರೋಫಿ ಸಹಿತ ಒಂದು ಲಕ್ಷ ರೂಪಾಯಿ ನಗದು ಬಹುಮಾನ ಪಡೆಯಿತು.
ಕ್ವೀನ್ ಇಲೆವೆನ್ ಕುವೈಟ್ ಎ ತಂಡವು ದ್ವಿತೀಯ ಟ್ರೋಫಿ ಸಹಿತ ಐವತ್ತು ಸಾವಿರ ರೂಪಾಯಿ ನಗದು ಪಡೆಯಿತು.
ಹೆಜಮಾಡಿ ಬಿಲ್ಲವಾಸ್ ತಂಡವು ತೃತೀಯ ಸ್ಥಾನಿಯಾಗಿ ಟ್ರೋಫಿ ಸಹಿತ ಇಪ್ಪತೈದು ಸಾವಿರ ಪಡೆಯಿತು.
ವೈಯಕ್ತಿಕ ಪ್ರಶಸ್ತಿ
ಸರಣಿ ಶ್ರೇಷ್ಠ ಪ್ರಶಸ್ತಿ ಸಹಿತ ರೂಪಾಯಿ ಇಪ್ಪತ್ತು ಸಾವಿರ ನಗದನ್ನು ಕ್ವೀನ್ ಇಲೆವೆನ್ ಎ ತಂಡದ ರಿಂಕು ಪಡೆದರೆ, ಅತ್ಯುತ್ತಮ ಬೌಲರ್ ಆಗಿ ದುಬೈ ವಾರಿಯರ್ಸ್ ನ ಅನಿತಾ ನಗದು ಹತ್ತು ಸಾವಿರ ಪಡೆದರು ಹಾಗೂ ಅತ್ಯುತ್ತಮ ಬ್ಯಾಟರ್ ಆಗಿ ದುಬೈ ವಾರಿಯರ್ಸ್ ನ ಚೈತ್ರಾ ನಗದು ಹತ್ತು ಸಾವಿರ ಪಡೆದರು.
ಸಮಾರೋಪ ಸಮಾರಂಭದ ವೇದಿಕೆಯಲ್ಲಿ ಕ್ರೀಡಾ ಕ್ಷೇತ್ರದ ಸಾಧಕರಾದ ಧನಲಕ್ಷ್ಮಿ ಪೂಜಾರಿ, ಚಂದು ವೆಂಕಟೇಶಪ್ಪ, ದೀಪಿಕಾ ಆರ್ ಅಮೀನ್., ಮೋನಿಷಾ ಎನ್ ಎಸ್ ಅಮೀನ್ ಅವರನ್ನು ಸನ್ಮಾನಿಸಲಾಯಿತು.

ಪಂದ್ಯಾಕೂಟದ ಯಶಸ್ಸಿಗೆ ವಿಶೇಷವಾಗಿ ಸಹಕರಿಸಿದ ಶ್ರೀಮತಿ ಶ್ವೇತಾ ಕೋಟ್ಯಾನ್ ಕುವೈಟ್ ಹಾಗೂ ಶ್ರೀಮತಿ ಸುಷ್ಮಾ ಅರುಣ್ ಇವರನ್ನು ಘಟಕದ ಪರವಾಗಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ವೈದ್ಯಕೀಯ ಕ್ಷೇತ್ರದ ಡಾ. ಪಿ.ಕೆ. ಕಿರಣ್ ಕುಮಾರ್, ಅಖಿಲ ಭಾರತ ಬಿಲ್ಲವರ ಮಹಿಳಾ ಸಂಘದ ಅಧ್ಯಕ್ಷೆ ಸುಮಲತಾ ಎನ್. ಸುವರ್ಣ ಹಾಗೂ ಮುಂಬೈ ಬಿಜೆಪಿ ದಕ್ಷಿಣ ಭಾರತ ಘಟಕದ ಪ್ರಧಾನ ಕಾರ್ಯದರ್ಶಿ ಸದಾನಂದ ಪೂಜಾರಿ ಮಾದುಮನೆ, ಉದ್ಯಮಿ ಗಣೇಶ್ ಗುಜರಾನ್, ಎ. ನಾರಾಯಣ ಪೂಜಾರಿ ಹೊಸಪೇಟೆ, ಪಡುಬಿದ್ರಿ ಬಿಲ್ಲವ ಸಮಾಜ ಸೇವಾಸಂಘ ದ ಅಧ್ಯಕ್ಷರಾದ ವೈ. ಸುಧೀರ್ ಕುಮಾರ್, ಯುವವಾಹಿನಿ ಕೇಂದ್ರ ಸಮಿತಿಯ ಕಾರ್ಯದರ್ಶಿ ರೇಖಲತಾ, ಅಶೋಕ್ ಪೂಜಾರಿ ಹೊಸಪೇಟೆ, ಮುಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ವಾಮನ್ ಕೋಟ್ಯಾನ್ ನಡಿಕುದ್ರು, ಪ್ರಭೋದಚಂದ್ರ ಹೆಜಮಾಡಿ, ಲೋಕೇಶ್ ಅಮೀನ್ ಹೆಜಮಾಡಿ, ಪ್ರಕಾಶ್ ಶೆಟ್ಟಿ ಪಾದೆಬೆಟ್ಟು ಅತಿಥಿಗಳಾಗಿ ಭಾಗವಹಿಸಿ ಕ್ರೀಡಾಕೂಟದ ಯಶಸ್ಸಿಗೆ ಸಾಕ್ಷಿಯಾದರು. ಘಟಕದ ಕಾರ್ಯದರ್ಶಿ ಭಾಸ್ಕರ್ ಎನ್. ಅಂಚನ್ ವಂದಿಸಿದರು. ಕ್ರೀಡಾ ನಿರ್ದೇಶಕ ಶ್ರವಣ್ ಕುಮಾರ್ ಉಪಸ್ಥಿತರಿದ್ದರು.
ನೂರಾರು ಕ್ರೀಡಾಭಿಮಾನಿಗಳು ಮತ್ತು ಸಮುದಾಯದ ಬಾಂಧವರು ಈ ಐತಿಹಾಸಿಕ ಪಂದ್ಯಾಟಕ್ಕೆ ಸಾಕ್ಷಿಯಾದರು. ಮಹಿಳಾ ಕ್ರೀಡಾಪಟುಗಳ ಸ್ಪೂರ್ತಿಯುತ ಭಾಗವಹಿಸುವಿಕೆ ಹಾಗೂ ಸಂಘಟಕರ ಶಿಸ್ತಿನ ನಿರ್ವಹಣೆಯಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿದ್ದು, ಸಮಾಜದ ವಿವಿಧ ವಲಯಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ.


