ಪಣಂಬೂರು : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ದಿನಾಂಕ 01-02-2026, ರವಿವಾರ ಒಂದು ದಿನದ ದೇವಸ್ಥಾನ ಯಾತ್ರೆ ಮತ್ತು ಪ್ರವಾಸ ಕಾರ್ಯಕ್ರಮವನ್ನು ಭಕ್ತಿಭಾವ ಹಾಗೂ ಆತ್ಮೀಯತೆಯೊಂದಿಗೆ ಆಯೋಜಿಸಲಾಗಿತ್ತು.
ಈ ಯಾತ್ರೆಯ ಅಂಗವಾಗಿ ಕಣಿಪುರ ಗೋಪಾಲ ಕೃಷ್ಣ ದೇವಸ್ಥಾನ, ಅನಂತಪುರ ಪದ್ಮನಾಭ ಸ್ವಾಮಿ ದೇವಸ್ಥಾನ, ಮಲ್ಲ ದುರ್ಗಾ ಪರಮೇಶ್ವರಿ ದೇವಸ್ಥಾನ, ಮಧೂರು ಮದನಂತೇಶ್ವರ ವಿನಾಯಕ ದೇವಸ್ಥಾನ, ಪರಶಿನ ಕಡವು ಮುತ್ತಪ್ಪ ದೇವಸ್ಥಾನ ಹಾಗೂ ಬೇಕಲ್ ಬೀಚ್ ಪ್ರವಾಸವನ್ನು ಯಶಸ್ವಿಯಾಗಿ ನಡೆಸಲಾಯಿತು.

ಯಾತ್ರಿಗಳು ಮೊದಲಾಗಿ ಕಣಿಪುರ ಗೋಪಾಲ ಕೃಷ್ಣ ದರ್ಶನ ಪಡೆದು, ನಂತರ ಅನಂತಪುರ ಪದ್ಮನಾಭ ಸ್ವಾಮಿ ದೇವಸ್ಥಾನದಲ್ಲಿ ಉಪಹಾರ ಸೇವಿಸಿ, ಮುಂದಿನ ದೇವಸ್ಥಾನಗಳಿಗೆ ಕ್ರಮಬದ್ಧವಾಗಿ ಪ್ರಯಾಣ ಮುಂದುವರೆಸಿದರು. ಕೊನೆಯಲ್ಲಿ ಪರಶಿನ ಕಡವು ಮುತ್ತಪ್ಪ ದೇವಸ್ಥಾನದಲ್ಲಿ ದರ್ಶನ ಮಾಡಿ, ಮಧ್ಯಾಹ್ನದ ಭೋಜನ ಹಾಗೂ ಸ್ವಲ್ಪ ಖರೀದಿಯ ನಂತರ, ಸಂಜೆ ವೇಳೆಗೆ ಬೇಕಲ್ ಬೀಚ್ ಪ್ರವಾಸವನ್ನು ಅನುಭವಿಸಿದರು.
ಯಾತ್ರೆಯ ಸಂಚಾಲಕರಾದ ಯಶಸ್ವಿನಿ, ಸುಮಿತ್ರಾ ಪ್ರಕಾಶ್, ಸಂದೀಪ್ ಕೋಟ್ಯಾನ್ ಹಾಗೂ ಮನಿಷಾ ರೂಪೇಶ್ ಅವರು ಯಾತ್ರಿಗಳನ್ನು ಉಲ್ಲಾಸದಿಂದ ರಂಜಿಸುವ ಉದ್ದೇಶದಿಂದ ವಿವಿಧ ಆಟಗಳು ಮತ್ತು ರಸಪ್ರಶ್ನೆ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ರಾತ್ರಿ ಎಲ್ಲರಿಗೂ ಭೋಜನದ ವ್ಯವಸ್ಥೆ ಮಾಡಲಾಗಿದ್ದು, ನಂತರ ಮಂಗಳೂರಿಗೆ ಸುರಕ್ಷಿತವಾಗಿ ಮರಳಲಾಯಿತು.
ಯಾತ್ರೆಯ ಅಂತ್ಯದಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಮಾಜಿ ಅಧ್ಯಕ್ಷರಾದ ಸಂಜೀವ ಸುವರ್ಣ ಅವರು ಯುವವಾಹಿನಿಯ ತತ್ವ–ಧ್ಯೇಯಗಳು ಮತ್ತು ಸಂಘಟನಾ ಮೌಲ್ಯಗಳ ಕುರಿತು ಯಾತ್ರಿಗಳಿಗೆ ಪ್ರೇರಣಾದಾಯಕ ಮಾತುಗಳನ್ನು ಆಡಿದರು. ಇಂತಹ ಯಾತ್ರೆಗಳು ಮುಂದೆಯೂ ನಿರಂತರವಾಗಿ ನಡೆಯಲಿ, ಸದಸ್ಯರ ನಡುವಿನ ಸಂಪರ್ಕದ ಕೊಂಡಿ ಮತ್ತಷ್ಟು ಗಟ್ಟಿಯಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಯಾತ್ರೆಯನ್ನು ಯಶಸ್ವಿಯಾಗಿ ಆಯೋಜಿಸಿದ ಘಟಕದ ಅಧ್ಯಕ್ಷರಾದ ಸುನಿಲ್ ಸಾಲ್ಯಾನ್, ಸಂಚಾಲಕರಾದ ಯಶಸ್ವಿನಿ ಮತ್ತು ಸುಮಿತ್ರಾ, ಯಾತ್ರೆಯನ್ನು ರಂಜಕಗೊಳಿಸಿದ ಸಂದೀಪ್ ಕೋಟ್ಯಾನ್ ಹಾಗೂ ಮನಿಷಾ ರೂಪೇಶ್, ಹಾಗು ಪ್ರತ್ಯಕ್ಷ–ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸಲಾಯಿತು. ಈ ಭಕ್ತಿಪೂರ್ಣ ಹಾಗೂ ಸ್ಮರಣೀಯ ದೇವಸ್ಥಾನ ಯಾತ್ರೆಯಲ್ಲಿ ಸುಮಾರು 112 ಯಾತ್ರಿಗಳು ಭಾಗವಹಿಸಿದ್ದರು.


