ಉಡುಪಿ: ವಿವಿಧ ರೂಪದ ಸಾಮಾಜಿಕ ಕಟ್ಟುಪಾಡುಗಳ ಕಾರಣದಿಂದ ಗಂಭೀರ ಶೋಷಣೆಗೆ ಗುರಿಯಾಗಿದ್ದ ಸಮಾಜಕ್ಕೆ ಬೆಳಕು ತೋರಿದ ಮಹಾನ್ ಚಿಂತಕ ನಾರಾಯಣ ಗುರು ಆಗಿದ್ದಾರೆ. ಸಮಾನ ಮನಸ್ಕ ಅನುಯಾಯಿಗಳ ಮೂಲಕ ತ್ಯಾಗ ಹಾಗೂ ಸೇವೆಯ ಮೌನ ಕ್ರಾಂತಿಯನ್ನು ಸಂಘಟಿಸಿದ ಗುರುಗಳಲ್ಲಿ ಬದ್ದತೆಯ ಅನನ್ಯ ಆದರ್ಶಗಳು ಅಡಗಿವೆ ಎಂದು ರಂಗನಿರ್ದೇಶಕ ವಿದ್ದು ಉಚ್ಚಿಲ್ ತಿಳಿಸಿದರು.

ಪ್ರಸ್ತುತ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಡಿ ಸಾಮಾನ್ಯರ ಬದುಕನ್ನು ದುಸ್ತರಗೊಳಿಸುತ್ತಿರುವ ಎಲ್ಲಾ ತರದ ಸಾಮಾಜಿಕ ಬಂಧನಗಳಿಂದ ಬಿಡುಗಡೆಯು ಗುರುತತ್ವಗಳ ಪಾಲನೆಯಿಂದ ಮಾತ್ರ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇವರು ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಆಯೋಜಿಸಲಾದ ಗುರು ಸತ್ಸಂಗ ಕಾರ್ಯಕ್ರಮದ 25ನೇ ಅವತರಣಿಕೆಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಗುರು ಸಂದೇಶ ನೀಡಿದರು. ಈ ಕಾರ್ಯಕ್ರಮವು ದಿನಾಂಕ 08-01-2026, ಗುರುವಾರದಂದು, ಯುವವಾಹಿನಿ ಉಡುಪಿ ಘಟಕದ ರಜತ ಸಂಭ್ರಮ ಸಂಚಾಲಕರಾದ ರಘುನಾಥ್ ಮಾಬಿಯಾನ್ ಅವರ ನಿವಾಸದಲ್ಲಿ ಜರಗಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ದಯಾನಂದ ಕರ್ಕೇರ ವಹಿಸಿ ಸ್ವಾಗತಿಸಿದರು. ನಾರಾಯಣ ಗುರು ತತ್ವಪ್ರಚಾರ ಹಾಗೂ ಅನುಷ್ಠಾನ ನಿರ್ದೇಶಕರಾದ ಅರವಿಂದ ಕೋಟ್ಯಾನ್ ಕಲ್ಲುಗುಡ್ಡೆ ಕಾರ್ಯಕ್ರಮವನ್ನು ನಿರೂಪಿಸಿ ಧನ್ಯವಾದ ಸಲ್ಲಿಸಿದರು. ಈ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರುಗಳು, ಸಲಹೆಗಾರರು ಹಾಗೂ ಸದಸ್ಯರು ಉಪಸ್ಥಿತರಿದ್ದರು.


