ಬಂಟ್ವಾಳ ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ, ಪುಂಜಾಲಕಟ್ಟೆ ಶ್ರೀ ನಾರಾಯಣಗುರು ವಸತಿ ಶಾಲೆ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘ ಗಾಣದಪಡ್ಡು, ಯುವವಾಹಿನಿ ಬಂಟ್ವಾಳ ಘಟಕ ಹಾಗೂ ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಸಹಯೋಗದೊಂದಿಗೆ ಬ್ರಹ್ಮಶ್ರೀ ನಾರಾಯಣಗುರುಗಳ 171ನೇ ಜನ್ಮದಿನಾಚರಣೆ ಪ್ರಯುಕ್ತ ತಾಲೂಕು ಮಟ್ಟದ ಗುರುಜಯಂತಿ ಆಚರಣೆ ದಿನಾಂಕ 07/09/2025 ನೇ ಆದಿತ್ಯವಾರ ಬಿ.ಸಿ.ರೋಡಿನ ಗಾಣದಪಡ್ಡುವಿನ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು.
ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ ವಹಿಸಿ ಮಾತನಾಡಿ, ಸಂಘರ್ಷ ಇಲ್ಲದೆ ಸಾಮಾಜಿಕ ಕ್ರಾಂತಿ ಮಾಡಿದ ಬ್ರಹ್ಮಶ್ರೀ ನಾರಾಯಣಗುರುಗಳು ಜಗತ್ತಿನ ಗಮನ ಸೆಳೆದಿದ್ದಾರೆ. ಅವರ ಹೆಸರಲ್ಲಿ ಪುಂಜಾಲಕಟ್ಟೆಯಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡ ಬ್ರಹ್ಮಶ್ರೀ ನಾರಾಯಣಗುರು ವಸತಿ ಶಾಲೆಗೆ ಈಗ ಬಾಡಿಗೆ ಕಟ್ಟಡದಲ್ಲಿರುವ ವಿದ್ಯಾರ್ಥಿಗಳನ್ನು ಇಲಾಖೆ ವಿಳಂಬ ಮಾಡದೆ ಸ್ಥಳಾಂತರಿಸಬೇಕು ಅಲ್ಲೊಂದು ಧ್ಯಾನಮಂದಿವನ್ನೂ ನಿರ್ಮಿಸಲಾಗುವುದು ಎಂದರು.
ಬಂಟ್ವಾಳ ಪುರಸಭಾ ಅಧ್ಯಕ್ಷ ಬಿ.ವಾಸು ಪೂಜಾರಿ ಮಾತನಾಡಿ, ಗುರುಗಳು ನೀಡಿದ ಬೆಳಕಿನ ಪಥದಲ್ಲಿ ಸಾಗೋಣ ಎಂದರು.
ಉಪತಹಸೀಲ್ದಾರ್ ನವೀನ್ ಬೆಂಜನದವು ಮಾತನಾಡಿ, ನಾರಾಯಣಗುರುಗಳ ವಿಚಾರಧಾರೆ ಎಲ್ಲರಿಗೂ ತಲುಪುವಂತಾಗಲಿ ಎಂದರು.
ಶ್ರೀನಾರಾಯಣಗುರು ವಸತಿ ಶಾಲೆ ಮುಖ್ಯೋಪಾಧ್ಯಾಯ ಸಂತೋಷ್ ಕುಮಾರ್ ಗುರು ಸಂದೇಶ ನೀಡಿ ಮೌನ ಕ್ರಾಂತಿಯ ಮೂಲಕ ಅಸಮಾನತೆ ವಿರುದ್ಧ ಹೋರಾಟ ಮಾಡಿದವರು ಗುರುಗಳು, ಕ್ರಾಂತಿ ಮೂಲಕ ಶಾಂತಿ ಮಂತ್ರ ಪಠಿಸಿದವರು ಎಂದರು.
ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಬೇಬಿ ಕುಂದರ್ ಮಾತನಾಡಿ ವಿದ್ಯಾರ್ಥಿಗಳು ಗುರಿ ತಲುಪಲು ನಾರಾಯಣಗುರುಗಳ ಸಂದೇಶ ಸಹಕಾರಿ ಎಂದು ಶುಭ ಹಾರೈಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷೆ ಜಯಂತಿ ಪೂಜಾರಿ, ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಯುವವಾಹಿನಿ ಬಂಟ್ವಾಳ ಅಧ್ಯಕ್ಷ ನಾಗೇಶ್ ಪೂಜಾರಿ ನೈಬೈಲು, ಬಂಟ್ವಾಳ ತಾಲೂಕು ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರಾಗಿಣಿ ಮಾಧವ ಚಂಡ್ತಿಮಾರ್ ಉಪಸ್ಥಿತರಿದ್ದರು. ಯುವವಾಹಿನಿ ನಿಕಟಪೂರ್ವ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರ್ವಹಿಸಿದರು.


