ಮೂಡುಬಿದಿರೆ: ದಿನೇ ದಿನೇ ಬಲಿಷ್ಠ ಸಂಘಟನೆಯಾಗಿ ಯಶಸ್ಸಿನತ್ತ ಮುನ್ನುಗ್ಗುತ್ತಿರುವ ಯುವವಾಹಿನಿಯ ಸದಸ್ಯರ ಸಿದ್ದತೆ ಮತ್ತು ಬದ್ದತೆ ಇತರರಿಗೆ ಮಾದರಿಯಾಗಿದೆ ಎಂದು ಉದ್ಯಮಿ ನಾರಾಯಣ ಪಿ.ಎಂ ತಿಳಿಸಿದರು.
ಅವರು ಯುವವಾಹಿನಿ ಮೂಡುಬಿದಿರೆ ಘಟಕದ ಆಶ್ರಯದಲ್ಲಿ ದಿನಾಂಕ 15-09-2024 ರಂದು ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘದಲ್ಲಿ ನಡೆದ ಬಹುಮಾನ, ವಿದ್ಯಾರ್ಥಿ ವೇತನ ಹಾಗೂ ಸದಸ್ಯರ ಐಡಿ ಕಾರ್ಡ್ ವಿತರಣಾ ಸಮಾರಂಭವನ್ನು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದರು. ಬದುಕಿನಲ್ಲಿ ಎದುರಾಗುವ ಪ್ರತಿಕೂಲ ಪರಿಸ್ಥಿತಿಯನ್ನು ಮೆಟ್ಟಿ ನಿಂತು ಮುನ್ನಡೆದಾಗ ಯಶಸ್ಸು ಸಾಧ್ಯ ಎಂದು ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಸೈಂಟ್ ಅಲೋಶಿಯಸ್ ಪರಿಗಣಿತ ವಿ.ವಿ ಪ್ರಾಧ್ಯಾಪಕ ಡಾ. ರಾಕೇಶ್ ಕುಮಾರ್ ಅಭಿಪ್ರಾಯ ಪಟ್ಟರು.
ಯುವವಾಹಿನಿ ಮೂಡುಬಿದಿರೆ ಘಟಕದ ಯಶಸ್ವೀ ಸಮಾಜಮುಖಿ ಕಾರ್ಯಗಳು ಜನ ಮನ್ನಣೆ ಗಳಿಸಿದೆ ಎಂದು ಸಮಾರಂಭದ ಅತಿಥಿ ಮೂಡುಬಿದಿರೆ ಗುರುನಾರಾಯಣ ಸ್ವಾಮಿ ಸೇವಾ ಸಂಘದ ಅಧ್ಯಕ್ಷರಾದ ಸುರೇಶ್ ಕೆ. ಪೂಜಾರಿ ತಿಳಿಸಿದರು.
106 ಸದಸ್ಯರ ಸೇರ್ಪಡೆಯ ಮೂಲಕ ಯುವವಾಹಿನಿ ಮೂಡಬಿದ್ರೆ ಘಟಕವು ಹೊಸ ಮೈಲಿಗಲ್ಲು ಸ್ಥಾಪಿಸಿದೆ ಎಂದು ಅತಿಥಿಯಾಗಿ ಭಾಗವಹಿಸಿದ್ದ ರೊಟರಿ ಕ್ಲಬ್ ವಲಯ ಸೇನಾನಿ ಪ್ರವೀಣ್ ಪಿರೇರಾ ತಿಳಿಸಿದರು.
ಬಹುಮಾನ ವಿತರಣೆ :
ಗುರುಸ್ಮರಣೆ ಕಾರ್ಯಕ್ರಮದಂದು ನಡೆದ ಚಿತ್ರಕಲೆ, ಭಾಷಣ ಹಾಗೂ ಪ್ರಬಂಧ ಸ್ಪರ್ಧೆಯ ವಿಜೇತ 56 ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ನಗದು ಪುರಸ್ಕಾರ ನೀಡಿ ಗೌರವಿಸಲಾಯಿತು. ಜೀವಿತಾ ಶಂಕರ್, ಗೀತಾ ದಿನಕರ್, ಪ್ರಭಾಕರ್ ಚಾಮುಂಡಿಬೆಟ್ಟ, ಡಾ. ಶುಭಕರ್ ಅಂಚನ್ ವಿಜೇತ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಿದರು.
ರೂ 1.20 ಲಕ್ಷ ವಿದ್ಯಾರ್ಥಿ ವೇತನ ವಿತರಣೆ :
40 ಮಂದಿ ಅರ್ಹ ವಿದ್ಯಾರ್ಥಿಗಳಿಗೆ ಒಟ್ಟು ರೂ 1.20 ಲಕ್ಷ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಯುವಸ್ಪಂದನ ಯೋಜನೆಯ ಅಧ್ಯಕ್ಷ ನವಾನಂದ, ಯೋಜನೆಯ ಮೂಲಕ ವಿದ್ಯಾರ್ಥಿ ವೇತನ ಪಡೆದ ಅರ್ಹ ವಿದ್ಯಾರ್ಥಿಗಳ ಆಯ್ಕೆಯ ಬಗ್ಗೆ ಪ್ರಸ್ತಾವನೆ ಮಾಡಿದರು. ಯೋಜನೆಯ ಸಂಚಾಲಕರಾದ ದಯಾನಂದ ಮಾಸ್ತಿಕಟ್ಟೆ ಅರ್ಹ ವಿದ್ಯಾರ್ಥಿಗಳನ್ನು ಸಭೆಗೆ ಪರಿಚಯಿಸಿದರು.
ಗುರುತಿನ ಚೀಟಿ ವಿತರಣೆ :
ಯುವವಾಹಿನಿಗೆ ಆಕರ್ಷಿತರಾಗಿ ನೂತನವಾಗಿ ಸೇರ್ಪಡೆಗೊಂಡ 106 ಸದಸ್ಯರಿಗೆ ಯುವವಾಹಿನಿಯ ಸದಸ್ಯತ್ವ ಸಂಖ್ಯೆಯನ್ನೊಳಗೊಂಡ ಗುರುತಿನ ಚೀಟಿ ವಿತರಿಸಲಾಯಿತು.
ಗೌರವ ಅಭಿನಂದನೆ :
ಮೂಡುಬಿದಿರೆ ಪುರಸಭೆಗೆ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ನಾಗರಾಜ ಪೂಜಾರಿ ಹಾಗೂ ಬಾಲ ಪ್ರತಿಭೆ ಸುನಿಕ್ಷಾ ಮಾರ್ನಾಡ್ ಇವರುಗಳನ್ನು ಅಭಿನಂದಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ, ಆಳ್ವಾಸ್ ಕಾಲೇಜಿನ ಉಪನ್ಯಾಸಕ ಡಾ. ಯೋಗೀಶ್ ಕೈರೋಡಿ, ಯುವಸ್ಪಂದನ ಅಧ್ಯಕ್ಷ ನವಾನಂದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಂಕರ್ ಎ. ಕೋಟ್ಯಾನ್ ಪ್ರಸ್ತಾವನೆಯ ಮೂಲಕ ಸ್ವಾಗತಿಸಿದರು. ಕಾರ್ಯದರ್ಶಿ ಗಿರೀಶ್ ಕೋಟ್ಯಾನ್ ವಂದಿಸಿದರು. ಸುಧಾಕರ್ ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.