ಉಪ್ಪಿನಂಗಡಿ : ಯುವವಾಹಿನಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ನಿವೃತ ಶಿಕ್ಷಕರಿಗೆ ಗೌರವಾರ್ಪಣೆ ಸಲ್ಲಿಸುವ ಗುರು ವಂದನಾ ಕಾರ್ಯಕ್ರಮವನ್ನು ಘಟಕದ ಅಧ್ಯಕ್ಷರಾದ ಸೋಮಸುಂದರ್ ರವರ ಅಧ್ಯಕ್ಷತೆಯಲ್ಲಿ, ದಿನಾಂಕ 05-09-2024ರಂದು ಅಪರಾಹ್ನ ನಡೆಸಲಾಯಿತು. ಬೆಳ್ತಂಗಡಿ ತಾಲೂಕು ಪುತ್ತಿಲ ಗ್ರಾಮದ ಪೀಲ್ಯ ಮನೆ ಅಣ್ಣು ಪೂಜಾರಿಯವರನ್ನು ಅವರ ಪೀಲ್ಯ ಮನೆಯಲ್ಲಿ ಶಾಲು ಹೊದಿಸಿ, ಫಲಪುಷ್ಪ, ಸ್ಮರಣಿಕೆ ಹಾಗೂ ಸನ್ಮಾನ ಪತ್ರ ನೀಡಿ ಗೌರವಿಸಲಾಯಿತು.
ಅವಿಭಜಿತ ಪುತ್ತೂರು ತಾಲೂಕಿನ ಆಲಂತಾಯ ಗ್ರಾಮದ ಬಟ್ಲಡ್ಕ ಮನೆಯಲ್ಲಿ ನಿವೃತ್ತ ಶಿಕ್ಷಕ ದಂಪತಿಗಳಾದ ಸಂಜೀವ ಪೂಜಾರಿ ಮತ್ತು ಸುಗಂಧಿ ಸಂಜೀವ ಪೂಜಾರಿ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಗುರು ಶ್ಲೋಕ ದೊಂದಿಗೆ ಆರಂಭಗೊಂಡ ಗುರು ವಂದನಾ ಕಾರ್ಯಕ್ರಮದ ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ನೆಲ್ಯಾಡಿಯ ಖ್ಯಾತ ವೈದ್ಯರಾದ ಸದಾನಂದ ಕುಂದರ್ ನಡೆಸಿ ಕೊಟ್ಟರು.
ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು, ಉಪ್ಪಿನಂಗಡಿಯ ಪ್ರಖ್ಯಾತ ದಂತ ವೈದ್ಯರು ಆಗಿರುವ ಡಾ. ರಾಜಾರಾಮ್ ಕೆ. ಬಿ ಯವರು ಶುಭ ನುಡಿ ಸಲ್ಲಿಸುತ್ತಾ ಘಟಕವು ಹಿರಿಯ ಶಿಕ್ಷಕರ ಮನೆ ಮನೆಗೆ ತೆರಳಿ ಕಾರ್ಯಕ್ರಮ ನಡೆಸುತ್ತಿರುವುದು ಎಲ್ಲರಿಗೂ ಪ್ರೇರಕ, ಶಿಕ್ಷಕರು ಮಕ್ಕಳನ್ನು ತಿದ್ದಿ ಸಮಾಜದ ಶಕ್ತಿಗಳನ್ನಾಗಿ ರೂಪಿಸುವವರು, ನಿವೃತ್ತಿ ನಂತರವೂ ಅವರ ಬಳಿ ಬಂದು ಅವರ ಸೇವೆಯ ಮಹತ್ವವನ್ನು ನೆನಪಿಸಿ ಗೌರವಿಸುವುದು ಸಂಘಟನೆಯ ಕ್ರಿಯಾಶೀಲತೆಯನ್ನು ಎತ್ತರಿಸುತ್ತದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಅಜಿತ್ ಕುಮಾರ್ ಪಾಲೇರಿ ಇವರುಗಳು ಉಪಸ್ಥಿತರಿದ್ದರು.
ಘಟಕದ ಮಾಜಿ ಅಧ್ಯಕ್ಷರುಗಳಾದ ಚಂದ್ರಶೇಖರ್ ಸನೀಲ್ , ಕೃಷ್ಣಪ್ಪ ಪೂಜಾರಿ, ಉಪಾಧ್ಯಕ್ಷರಾದ ಪುನೀತ್. ವಿ ಡಿ. ಪದಾಧಿಕಾರಿ ಅಂಕಿತ್ ಎಂ. ಜಿ. ಮತ್ತು ಸದಸ್ಯರುಗಳು ಭಾಗವಹಿಸಿದ್ದರು.
ಕಾರ್ಯದರ್ಶಿ ಅನಿತಾ ಸತೀಶ್ ವಂದಿಸಿದರು. ಪ್ರವಾಸ ನಿರ್ದೇಶಕ ನಾಣ್ಯಪ್ಪ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು.