ಪಾಪುದಡಿ : ಸುಂದರ ಹಚ್ಚ ಹಸಿರ ತೋಟಗಳ ನಡುವೆ ಯುವವಾಹಿನಿ (ರಿ) ಕೊಲ್ಯ ಘಟಕದ ಕೋಶಾಧಿಕಾರಿ ಯುವ ರೈತ ಲತೀಶ್ ಪಾಪುದಡಿ ಇವರ ಕೊಳಕೆ ಗದ್ದೆಯಲ್ಲಿ ದಿನಾಂಕ 15/09/2024 ರಂದು ಯುವವಾಹಿನಿ ಕೊಲ್ಯ ಘಟಕದ ಸದಸ್ಯರಿಂದ ಭತ್ತ ನಾಟಿ ಕೆಲಸ ನಡೆಯಿತು.
ಹಿರಿಯ ಮಹಿಳೆಯರು ಓ ಬೇಲೆ ಬೇಲೆ ಹಾಡುತ್ತಾ ಘಟಕದ ಸದಸ್ಯರಿಗೆ ಸ್ಫೂರ್ತಿ ನೀಡುತ್ತಾ ನಾಟಿ ಮಾಡುವ ಕ್ರಮವನ್ನು ವಿವರಿಸಿದರು. ಅದರಂತೆ ಎಲ್ಲರೂ ಗದ್ದೆಯಲ್ಲಿ ಭತ್ತದ ನೇಜಿ ನಾಟಿ ಮಾಡುತ್ತಾ ಕೃಷಿ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡರು.
ಕೊಳಕೆ ನಾಟಿ ಕೆಲಸದಲ್ಲಿ ವಿಶೇಷ ಅತಿಥಿಗಳಾಗಿ ಡೆನ್ಮಾರ್ಕ್ ದೇಶದ ವಿದ್ಯಾರ್ಥಿಗಳು ನೇಜಿ ನಾಟಿಯಲ್ಲಿ ಕೈ ಜೋಡಿಸಿ ಕರಾವಳಿ ಕೃಷಿ ಕೆಲಸ, ಬತ್ತದ ನಾಟಿ ಕೆಲಸ, ರೈತರ ಕೆಲಸಗಳ ಬಗ್ಗೆ ವಿಶೇಷ ಮಾಹಿತಿ ಪಡೆದರು.
ಯುವವಾಹಿನಿ ಘಟಕದ ಸದಸ್ಯರೊಂದಿಗೆ ಉತ್ಸಾಹದಿಂದ ಭಾಗವಹಿಸಿ ನಾಟಿ ಕೆಲಸದಲ್ಲಿ ತಮ್ಮನ್ನು ಸಂತೋಷವಾಗಿ ತೊಡಗಿಸಿಕೊಂಡರು. ಬಿಸಿಲ ನಡುವೆ ಕೆಸರು ಗದ್ದೆಯಲ್ಲಿ ಚಿಕ್ಕ ಮಕ್ಕಳು ನಾಟಿ ಮಾಡುತ್ತ ಕೃಷಿ ಕೆಲಸದ ಮಹತ್ವ ತಿಳಿಯುತ್ತಾ ಸಂತೋಷ ಪಟ್ಟರು.
ಹಿರಿಯ ರೈತರು ರಾಮಣ್ಣ ಪಾಪುದಡಿ ಕೃಷಿಗಾರಿಕೆ ಮಹತ್ವದ ಬಗ್ಗೆ ಸದಸ್ಯರಿಗೆ ತಿಳಿ ಹೇಳಿದರು. ಭತ್ತದ ನೇಜಿ ನಾಟಿ ಮಾಡಿದ ಸದಸ್ಯರು ಕೃಷಿ ಕೆಲಸದ ಸಂತೃಪ್ತಿಯೊಂದಿಗೆ ದಿನ ಕಳೆದರು.
ಲತೀಶ್ ಪಾಪುದಡಿ ಕುಟುಂಬದವರು ಸದಸ್ಯರಿಗೆ ತಿಂಡಿ, ಊಟದ ವ್ಯವಸ್ಥೆ ಮಾಡಿದರು.
ಯುವವಾಹಿನಿ ಕೊಲ್ಯ ಘಟಕದ ಸದಸ್ಯರಿಗೆ ಭತ್ತದ ನಾಟಿಯ ಅನುಭವದ ಅವಕಾಶ ಕಲ್ಪಿಸಿದ ಪಾಪುದಡಿ ಕುಟುಂಬದವರಿಗೆ ಘಟಕದ ದ್ವಿತೀಯ ಉಪಾಧ್ಯಕ್ಷರು ಜೀವನ್ ಕೊಲ್ಯ ಧನ್ಯವಾದಗೈದರು.